ಮೈದಾನದಲ್ಲೇ ಧೋನಿಗೆ ವಿದಾಯ ಹೇಳಲು ಟೀಮ್ ಇಂಡಿಯಾ ಬಯಸುತ್ತದೆ – ಕೆ.ಎಲ್. ರಾಹುಲ್.
ಟೀಮ್ ಇಂಡಿಯಾ ಮಹೇಂದ್ರ ಸಿಂಗ್ ಧೋನಿಯವರಿಗೆ ಮೈದಾನದಲ್ಲೇ ವಿದಾಯ ಹೇಳಲು ಬಯಸುತ್ತಿದೆ. ಇದು ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್ ಮೆನ್ ಮತ್ತು ವಿಕೆಟ್ ಕೀಪರ್ ಕೆ.ಎಲ್. ರಾಹುಲ್ ಅವರ ವೈಯಕ್ತಿಕ ಬಯಕೆ. ಈಗಾಗಲೇ ಅಭಿಮಾನಿಗಳು ಮತ್ತು ಕ್ರಿಕೆಟ್ ಪಂಡಿತರು, ಮಾಜಿ ಕ್ರಿಕೆಟಿಗರು ಕೂಡ ಧೋನಿಗೆ ವಿದಾಯದ ಪಂದ್ಯವನ್ನು ಆಯೋಜನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದಕ್ಕೆ ಪೂರಕವಾಗಿ ಕೆ.ಎಲ್. ರಾಹುಲ್ ಕೂಡ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನಮಗೆ ಏನಾದ್ರೂ ಸಂದೇಹಗಳಿದ್ರೆ, ಅಥವಾ ಏನಾದ್ರೂ ಉತ್ತರಗಳು ಬೇಕಿದ್ರೆ ನಮಗೆ ಮಹೇಂದ್ರ ಸಿಂಗ್ ಧೋನಿ ಇರುತ್ತಿದ್ದರು ಎಂದು ಕೆ.ಎಲ್. ರಾಹುಲ್ ಹೇಳಿದ್ದಾರೆ. ಮಹೇಂದ್ರ ಸಿಂಗ್ ಧೋನಿಯವರು ಅಚ್ಚರಿಯಾಗಿ ನಿವೃತ್ತಿ ಘೋಷಣೆ ಮಾಡಿರುವುದು ಆಘಾತವನ್ನುಂಟು ಮಾಡಿದೆ. ವಿದಾಯದ ಪಂದ್ಯದ ಮೂಲಕ ಅವರಿಗೆ ಗೌರವ ನೀಡಬೇಕು. ಅವರ ಮಾರ್ಗದರ್ಶನದಲ್ಲಿ ಯಾರೆಲ್ಲಾ ಆಡಿದ್ದಾರೋ ಅವರೆಲ್ಲೆರ ಕೋರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ನಮಗೆ ಉತ್ತಮ ಮಾರ್ಗದರ್ಶಕರಾಗಿದ್ದರು. ನಮ್ಮ ತಪ್ಪುಗಳನ್ನು ಸರಿಪಡಿಸಲು ಧೋನಿ ಅವಕಾಶ ಕೊಟ್ಟಿದ್ದರು. ಅವರು ಯಾರನ್ನು ಬದಲಾಯಿಸಬೇಕು ಎಂದು ನಿರೀಕ್ಷೆ ಮಾಡುತ್ತಿರಲಿಲ್ಲ. ನಮ್ಮ ಸಂದೇಹಗಳು ಏನೇ ಇದ್ರೂ ಅದಕ್ಕೆ ಉತ್ತರ ನೀಡಲು ಅವರು ಜೊತೆಯಲ್ಲಿರುತ್ತಿದ್ದರು. ಆಟಗಾರರಿಗೆ ಬೆಂಬಲ ಹೇಗೆ ನೀಡಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು ಎಂಬುದು ಕೆಎಲ್ ರಾಹುಲ್ ಅವರ ಅಭಿಮತವಾಗಿದೆ.
ಇನ್ನು ಧೋನಿಯ ಸಡನ್ ನಿವೃತ್ತಿಯ ಬಗ್ಗೆ ಮಾತನಾಡಿದ ಕೆ.ಎಲ್. ರಾಹುಲ್, ಈ ಬಗ್ಗೆ ನನಗೆ ಪದಗಳೇ ಸಿಗುತ್ತಿಲ್ಲ. ಅವರ ಬಗ್ಗೆ ಏನು ಹೇಳುತ್ತೀರಿ ? ಏನು ಬರೆಯಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಅವರು ಎಷ್ಟೋ ಕ್ರಿಕೆಟರ್ಗಳ ಬದುಕನ್ನೇ ಬದಲಾಯಿಸಿದ್ದಾರೆ. ಅವರಿಗೆ ಮಾರ್ಗದರ್ಶನ ನೀಡಿದ್ದಾರೆ. ಅಷ್ಟೇ ಎಷ್ಟೊಂದು ಮಂದಿಗೆ ಸ್ಫೂರ್ತಿಯಾಗಿದ್ದಾರೆ. ಕ್ರಿಕೆಟ್ ಬದುಕಿನಲ್ಲಿ ಮತ್ತು ಸಾರ್ವಜನಿಕ ಬದುಕಿನಲ್ಲಿ ಅವರು ಮಾಡಿರುವ ಸಾಧನೆಗಳು ಅದ್ಭುತವಾಗಿದೆ ಎಂದು ಕೆ.ಎಲ್. ರಾಹುಲ್ ಬಣ್ಣಿಸಿದ್ದಾರೆ.








