ಜಮ್ಮು ಮತ್ತು ಕಾಶ್ಮೀರದ ಕುಲ್ಗಂನಲ್ಲಿ ಉಗ್ರರಿಂದ ಭಾರತೀಯ ಯೋಧನ ಅಪಹರಣ ?
ಕುಲ್ಗಾಮ್, ಅಗಸ್ಟ್ 3: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಪ್ರಾದೇಶಿಕ ಸೇನೆಯ (ಟಿಎ) ಯೋಧ ಕಾಣೆಯಾಗಿದ್ದು, ಅವರ ವಾಹನವು ಸುಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಭಾರತೀಯ ಸೇನಾ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಭಯೋತ್ಪಾದಕರು ಅವರನ್ನು ಅಪಹರಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ರಂಭಮಾ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಶೋಪಿಯಾನ್ ಜಿಲ್ಲೆಯ ನಿವಾಸಿ ಮುಜಾಫರ್ ಮಂಜೂರ್ ಅವರ ಹೆಸರಿನಲ್ಲಿ ನೋಂದಾಯಿಸಲಾದ ವಾಹನವನ್ನು ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿ ಸುಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಜೂರ್ ಪ್ರಾದೇಶಿಕ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಆವರನ್ನು ಉಗ್ರರು ಅಪಹರಿಸಿರಬಹುದೆಂದು ಶಂಕಿಸಿರುವ ಅಧಿಕಾರಿಗಳು ಮಂಜೂರ್ ರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಕಾಣೆಯಾದ ಸೈನಿಕನನ್ನು ಪತ್ತೆಹಚ್ಚಲು ಬೃಹತ್ ಮ್ಯಾನ್ಹಂಟ್ ಅನ್ನು ಪ್ರಾರಂಭಿಸಲಾಗಿದೆ. ಕುಲ್ಗಾಂನ ದಮ್ಹಾಲ್ ಹಂಜಿಪೊರಾ ಬಳಿ ಟಿಎ ಸೈನಿಕನ ವಾಹನವನ್ನು ಭಯೋತ್ಪಾದಕರು ತಡೆದಿದ್ದಾರೆ ಎಂದು ತಿಳಿದುಬಂದಿದೆ.








