ಸಚಿನ್ ಹೇಳಿಕೆಯನ್ನು ಪ್ರಶ್ನೆ ಮಾಡೋಣ… ಆದ್ರೆ ಸಾಧನೆ – ವ್ಯಕ್ತಿತ್ವವನ್ನು ಪ್ರಶ್ನೆ ಮಾಡೋ ಯೋಗ್ಯತೆ ನಮಗಿದೆಯಾ ?
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯ ವಿರುದ್ಧ ರೈತರ ಹೋರಾಟ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವುದು ಗೊತ್ತಿರುವ ವಿಚಾರ.
ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿಗಳು ಸಾಮಾಜಿಕ ಜಾಲ ತಾಣದ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ಬಗ್ಗೆ ದೇಶದ ಏಕತೆ ಮತ್ತು ಅಂತರಿಕ ವಿಚಾರದಲ್ಲಿ ಬೇರೆಯವರು ಮೂಗು ತೂರಿಸುವುದು ಸರಿಯಲ್ಲ. ನಮ್ಮ ಸಮಸ್ಯೆಯನ್ನು ನಾವೇ ಬಗೆ ಹರಿಸಿಕೊಳ್ಳುತ್ತೇವೆ ಎಂದು ಭಾರತೀಯ ಸೆಲೆಬ್ರಿಟಿಗಳು ಸಾಮಾಜಿಕ ಜಾಲ ತಾಣದಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಅದ್ರಲ್ಲೂ ಮುಖ್ಯವಾಗಿ ಸಚಿನ್ ತೆಂಡುಲ್ಕರ್ ಹೇಳಿಕೆಗೆ ವಿರುದ್ಧವಾಗಿ ಕೆಲವರು ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕು ಸಚಿನ್ ತೆಂಡುಲ್ಕರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇ ತಪ್ಪು ಎಂಬ ರೀತಿಯಲ್ಲಿ ಹೇಳಿದ್ದಾರೆ. ಹಾಗಂತ ಸಚಿನ್ ತೆಂಡುಲ್ಕರ್ ಎಲ್ಲೂ ಕೂಡ ರೈತರ ಹೋರಾಟ ತಪ್ಪು ಅಂತ ಹೇಳಿಲ್ಲ. ಅಂತರಿಕ ವಿಚಾರದಲ್ಲಿ ಬೇರೆಯವರು ಹೇಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಅದೊಂದೇ ಕಾರಣ ನೀಡಿ, ಸಚಿನ್ ತೆಂಡುಲ್ಕರ್ ಅವರ ವ್ಯಕ್ತಿತ್ವವನ್ನೇ ಪ್ರಶ್ನೆ ಮಾಡುತ್ತಿದ್ದಾರೆ. ಸಚಿನ್ ತೆಂಡುಲ್ಕರ್ ಸ್ವಾರ್ಥಿ, ಸಚಿನ್ ತೆಂಡುಲ್ಕರ್ ಭಾರತ ರತ್ನ ಪ್ರಶಸ್ತಿ ಕೊಟ್ಟಿರುವುದು ಯಾರು ? ರಾಜ್ಯ ಸಭೆಗೆ ಆಯ್ಕೆ ಮಾಡಿರುವುದು ಯಾರು ? ಸಚಿನ್ ತನ್ನ ಕೆರಿಯರ್ ಗೋಸ್ಕರ ಈ ರೀತಿ ಹೇಳಿಕೆ ನೀಡಿದ್ದಾರೆ ಅಂತ ಕೆಲವರು ಹೇಳಿದ್ದಾರೆ. ಹಾಗೇ ಅಂಬಾನಿ, ಅಮಿತ್ ಶಾ, ಮೋದಿಯವರನ್ನು ಒಲೈಕೆ ಮಾಡುತ್ತಿದ್ದಾರೆ ಅಂತನೂ ಹೇಳಿದ್ದಾರೆ. ಇನ್ನು ಕೆಲವರು ಸಚಿನ್ ವಿದೇಶಿ ಬ್ರಾಂಡ್ ಗಳಿಗೆ ರಾಯಭಾರಿಯಾಗಿರುವ ಬಗ್ಗೆ ಪ್ರಶ್ನೆ ಕೂಡ ಮಾಡಿದ್ದಾರೆ.
ಆದ್ರೆ ಒಂದು ಮಾತನ್ನು ನೆನಪಿಟ್ಟುಕೊಳ್ಳಿ.. ಸಚಿನ್ ನಮ್ಮ ನಿಮ್ಮಂತೆ ಭಾರತೀಯ. ಅವರಿಗೂ ಅಭಿವ್ಕಕ್ತಿ ಸ್ವಾತಂತ್ರ್ಯವಿದೆ. ತನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಹಕ್ಕು ಇದೆ. ಹೀಗಾಗಿ ತನ್ನ ಅಭಿಪ್ರಾಯ ಹೇಳಿದ್ದಾರೆ. ಅದು ಕೂಡ ರಿಹಾನಾ ಟ್ವಿಟ್ ಗೆ ಪ್ರತಿಕ್ರಿಯೆ ನೀಡಿರುವುದು.
ಇನ್ನು ರಿಯಾನ ತನ್ನ ದೇಶದಲ್ಲಿ ನಡೆಯುತ್ತಿರುವ ಸಮಸ್ಯೆಗಳ ಬಗ್ಗೆ ಮೊದಲು ಪ್ರಶ್ನೆ ಮಾಡಬೇಕು. ಆಕೆ ದೊಡ್ಡ ಸೆಲೆಬ್ರಿಟಿಯಾಗಿರಬಹುದು. ಆಕೆಗೂ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಇದೆ. ಆದ್ರೆ ಬೇರೆ ದೇಶದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡುವ ಮೊದಲು ತನ್ನ ದೇಶದ ಅಂತರಿಕ ಸಮಸ್ಯೆಗಳನ್ನು ಬಗೆ ಹರಿಸುವತ್ತ ಮೊದಲು ಚಿತ್ತವನ್ನಿಡಲಿ.
ಅದೇನೇ ಇರಲಿ, ಸಚಿನ್ ತೆಂಡುಲ್ಕರ್ ಯಾರನ್ನು ಕೇಳಿಕೊಂಡು ಕ್ರಿಕೆಟ್ ಆಡಲಿಲ್ಲ. ಯಾರನ್ನು ಒಲೈಕೆ ಮಾಡಬೇಕು ಅಂತ ಶತಕದ ಮೇಲೆ ಶತಕ ದಾಖಲಿಸಲಿಲ್ಲ. ಸ್ವಾರ್ಥಿ ಇರಬಹುದು. ಹಾಗಂತ ಈ ಮನುಕುಲದಲ್ಲಿ ಸ್ವಾರ್ಥ ಇಲ್ಲದೇ ಇರುವವರು ಯಾರಿದ್ದಾರೆ.. ಪ್ರತಿಯೊಬ್ಬರು ಸ್ವಾರ್ಥಿಗಳೇ. ಹಾಗೇ ಸಚಿನ್ ಕೂಡ ಸ್ವಾರ್ಥಿ. ತನ್ನ ಕೆರಿಯರ್ ಗೋಸ್ಕರ ಸ್ವಾರ್ಥಿಯಾಗಿ ಆಡಿಕೊಂಡು ವಿಶ್ವ ಕ್ರಿಕೆಟ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಇನ್ನು ಸಚಿನ್ ತನ್ನ ಆಟವನ್ನು ನೋಡಿ ಅಂತ ಯಾರನ್ನು ಕೇಳಿಲ್ಲ. ಅಥವಾ ಆಹ್ವಾನಿಸಿಲ್ಲ. ತನ್ನ ಸಾಮಥ್ರ್ಯ ಮತ್ತು ಅದ್ಭುತ ಆಟದ ಮೂಲಕವೇ ಅಭಿಮಾನಿ ಬಳಗವನ್ನು ಕಟ್ಟಿಕೊಳ್ಳುವಂತೆ ಮಾಡಿದ್ರು. ಸ್ಫೋಟಕ ಆಟದ ಮೂಲಕ ಪ್ರೇಕ್ಷಕರನ್ನು ಮೈದಾನದೊಳಗೆ ಬರುವಂತೆ ಮಾಡಿದ್ರು. ಟಿವಿಯಲ್ಲಿ ತನ್ನ ಆಟವನ್ನು ನೋಡುವಂತೆ ಮಾಡಿಕೊಂಡ್ರು. ಅಷ್ಟೇ ಅಲ್ಲ, ಮೈದಾನದಲ್ಲಿ ಸಚಿನ್ ಸಚಿನ್ ಸಚಿನ್ ಅಂತ ಮಂತ್ರ ಘೋಷದಂತೆ ಅಭಿಮಾನಿಗಳು ಕೂಗುವಂತೆ ಮಾಡಿದ್ದು ಅವರ ಆಟವೇ ಹೊರತು ಬೇರೇನೂ ಅಲ್ಲ.
ಹಾಗೇ ಸಚಿನ್ ಫಾರ್ಮ್ ನಲ್ಲಿ ಇಲ್ಲದೇ ಇದ್ದರೂ ತಂಡದಲ್ಲಿ ಭಾರತ ತಂಡದಲ್ಲಿ 24 ವರ್ಷ ಆಡಿದ್ದರು ಎಂಬ ಟೀಕೆಯೂ ಇದೆ. ಒಂದು ವೇಳೆ, ಸಚಿನ್ ಫಾರ್ಮ್ ನಲ್ಲಿ ಇಲ್ಲ ಅಂತ ಅಂದ ಮೇಲೆ ಆಯ್ಕೆ ಸಮಿತಿ ಸುಮ್ಮನೆ ತಂಡದಲ್ಲಿ ಸೇರಿಕೊಂಡಿತ್ತಾ.. ಬಿಸಿಸಿಐ ಸಚಿನ್ ತೆಂಡುಲ್ಕರ್ ಅಷ್ಟೊಂದು ಹೆದರಿಕೊಳ್ಳುತ್ತಿತ್ತಾ.. ಅಷ್ಟೇ ಅಲ್ಲ, ಸಚಿನ್ ಫಾರ್ಮ್ ನಲ್ಲಿ ಇಲ್ಲ, ಸ್ವಾರ್ಥಿಯಾಗಿರುತ್ತಿದ್ರೆ ಸಾವಿರಾರು ರನ್ ಗಳು ನೂರು ಶತಕಗಳು ಹಾಗೇ ಬಂದ್ವಾ ? ಟೀಕೆ ಮಾಡೋದು ಸುಲಭ.. ಆಡಿ ತೋರಿಸುವುದು ತುಂಬಾ ಕಷ್ಟ….
ಮತ್ತೊಂದೆಡೆ ಸಚಿನ್ ತೆಂಡುಲ್ಕರ್ ಗೆ ಭಾರತ ರತ್ನ ಕೊಟ್ಟಿರುವುದು ದೊಡ್ಡ ತಪ್ಪು ಅಂತ ಹೇಳುತ್ತಿದ್ದಾರೆ. ಆದ್ರೆ ಸಚಿನ್ ತಾನಾಗಿಯೇ ಭಾರತ ರತ್ನ ಕೊಡಿ ಅಂತ ಮನವಿ ಮಾಡಿಕೊಂಡಿರಲಿಲ್ಲ.. ಹಾಗೇ ರಾಜ್ಯ ಸಭೆಗೆ ತನ್ನನ್ನು ಆಯ್ಕೆ ಮಾಡಿ ಅಂತ ಕೇಳಿಕೊಂಡಿರಲಿಲ್ಲ. ಆದ್ರೆ ಸಚಿನ್ ನಿವೃತ್ತಿಯಾಗುತ್ತಿದ್ದಂತೆ, ಭಾರತ ರತ್ನ ಮತ್ತು ರಾಜ್ಯ ಸಭೆಗೆ ಯಾರು ಆಯ್ಕೆ ಮಾಡಿಕೊಂಡಿರುವುದು.. ಅದರ ಹಿಂದಿನ ಉದ್ದೇಶ ಏನಿತ್ತು ಎಂಬುದು ಗೊತ್ತಿಲ್ಲದ ವಿಚಾರವೇನೂ ಅಲ್ಲ.
ಇನ್ನು ಮಗನ ಕೇರಿಯರ್.. ಎಲ್ಲ ಅಪ್ಪಂದಿರಂತೆ ಸಚಿನ್ ಕೂಡ ತನ್ನ ಮಗನ ಕೇರಿಯರ್ ಬಗ್ಗೆ ಯೋಚಿಸುವುದು ತಪ್ಪಾ ? ರಾಜಕೀಯ, ಉದ್ದಯ, ಸಿನಿಮಾ, ಕೃಷಿ ಸೇರಿದಂತೆ ಎಲ್ಲರು ಕೂಡ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ. ಪ್ರತಿಯೊಂದು ಕುಟುಂಬ ರಾಜಕಾರಣವೇ. ಕುಟುಂಬ ರಾಜಕಾರಣ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ನಮ್ಮಲ್ಲಿ ಸಾಕಷ್ಟು ನಿದರ್ಶನಗಳಿಗೆ.
ಅಂದ ಮೇಲೆ ಸಚಿನ್ ತನ್ನ ಮಗನ ಕೆರಿಯರ್ ಬಗ್ಗೆ ಯೋಚನೆ ಮಾಡುವುದರಲ್ಲಿ ತಪ್ಪೇನೂ ಇಲ್ಲ. ಹಾಗೇ ಸಚಿನ್ ಪ್ರಭಾವ ಬಳಸಿಕೊಳ್ಳುವುದಾದ್ರೆ ತನ್ನ ಮಗನನ್ನು 19 ವಯೋಮಿತಿ ತಂಡದಲ್ಲಿ ಸೇರಿಸಿಕೊಳ್ಳಬಹುದಿತ್ತು. ಆದ್ರೆ ಸಚಿನ್ ಆ ರೀತಿ ಮಾಡಿಲ್ಲ. ತನ್ನ ಮಗನ
ಪ್ರತಿಭೆ ಮತ್ತು ಸಾಮಥ್ರ್ಯಕ್ಕೆ ತಕ್ಕಂತೆ ಆಡಿಕೊಂಡು ಇದೀಗ ಐಪಿಎಲ್ ನಲ್ಲಿ ಆಡುವ ಅರ್ಹತೆಯನ್ನು ಪಡೆದುಕೊಂಡಿದ್ದಾನೆ ಅರ್ಜುನ್ ತೆಂಡುಲ್ಕರ್. ಅರ್ಜುನ್ ತೆಂಡುಲ್ಕರ್ ಗೆ ಸಚಿನ್ ತೆಂಡುಲ್ಕರ್ ಅನ್ನೋ ಟ್ಯಾಗ್ ಲೈನ್ ಎಷ್ಟೊಂದು ಮುಳುವಾಗುತ್ತಿದೆ ಎಂಬುದು ಆತನಿಗೆ ಮಾತ್ರ ಗೊತ್ತು. ಐಪಿಎಲ್ ನಲ್ಲಿ ಅರ್ಜುನ್ ಗೆ ಆಡಲು ಅಂಬಾನಿ ತಂಡವೇ ಆಗಬೇಕಿಲ್ಲ. ಸಚಿನ್ ಮನಸು ಮಾಡಿದ್ರೆ ಬೇರೆ ತಂಡದಲ್ಲೂ ಆಡಿಸಬಹುದು. ಆದ್ರೆ ಸಚಿನ್ ಆ ರೀತಿ ಮಾಡಿಲ್ಲ. ಅರ್ಹತೆಯ ಆಧಾರದಲ್ಲಿ ಅರ್ಹತೆ ಪಡೆದುಕೊಳ್ಳಬೇಕು. ಸುಮ್ಮನೆ ಪ್ರಭಾವ ಬಳಸಿ ತಂಡಕ್ಕೆ ಸೇರಿಕೊಂಡ್ರೆ ಕೊನೆಯಲ್ಲಿ ಮರ್ಯಾದೆ ಹೋಗುವುದು ಯಾರದ್ದು ಎಂಬುದನ್ನು ಅರ್ಥಮಾಡಿಕೊಳ್ಳದಷ್ಟು ದಡ್ಡರಲ್ಲ ಸಚಿನ್ ತೆಂಡುಲ್ಕರ್.
[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

ಮತ್ತೊಂದೆಡೇ ವಿದೇಶಿ ಬ್ರಾಂಡ್ ಗಳಿಗೆ ಸಚಿನ್ ರಾಯಭಾರಿಯಾಗಿರೋದು ತಪ್ಪಾಗಿದ್ರೆ, ವಿದೇಶಿ ಕಂಪೆನಿಗಳಿಗೆ ಭಾರತದಲ್ಲಿ ಅವಕಾಶಕೊಟ್ಟಿರುವುದು ಕೂಡ ತಪ್ಪು ಅಲ್ವಾ ? ಹಾಗೇ ಇವತ್ತು ಬಿಸಿಸಿಐ, ಐಪಿಎಲ್ ಆಗಿಬಹುದು ಅಥವಾ ಕ್ರಿಕೆಟಿಗರು ಆಗಿರಬಹುದು.. ಜೇಬು ತುಂಬಾ ದುಡ್ಡು ತುಂಬಿರೋದಕ್ಕೆ ಎಲ್ಲೋ ಒಂದು ಕಡೆ ಕಾರಣ ಸಚಿನ್ ತೆಂಡುಲ್ಕರ್.
ಒಟ್ಟಿನಲ್ಲಿ ಸಚಿನ್ ಒಂದು ಹೇಳಿಕೆಯನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಮನಬಂದಂತೆ ಮಾತನಾಡುವ ಹಕ್ಕು ಮತ್ತು ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ. ಆದ್ರೆ ಅದನ್ನು ಮುಂದಿಟ್ಟುಕೊಂಡು ಸಚಿನ್ ವ್ಯಕ್ತಿತ್ವ ಮತ್ತು ಸಾಧನೆಯನ್ನು ಪ್ರಶ್ನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಆ ಯೋಗ್ಯತೆ ನಮ್ಮಗೆ ಇದೆಯಾ ಅನ್ನೋದನ್ನು ಮೊದಲು ಯೋಚಿಸಬೇಕು.








