ಹೊಸದಿಲ್ಲಿ, ಮೇ 17: ಭಾರತವು ನೂತನ ಸಾಧನೆಯನ್ನು ಮಾಡಿ ವಿಶ್ವದ ಗಮನ ಸೆಳೆದಿದೆ. ಭಾರತವು ಸ್ಥಳೀಯ ಕಂಪೆನಿಗಳು ಜೊತೆಗೂಡಿ ಸ್ಕ್ವಾಬ್ ಟೆಸ್ಟ್ ಉಪಕರಣವನ್ನು ತಯಾರಿಸಿದೆ.
ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರ ನೇತೃತ್ವದಲ್ಲಿ ಭಾರತ ಕೇವಲ ಹತ್ತು ದಿನಗಳ ಅವಧಿಯಲ್ಲಿ ಸ್ಕ್ವಾಬ್ ಟೆಸ್ಟ್ ಉಪಕರಣವನ್ನು ತಯಾರಿಸಿದ್ದು, ಚೀನಾದಿಂದ ಆಮದು ಮಾಡಿಕೊಳ್ಳುವುದಕ್ಕಿಂತ ಕಡಿಮೆ ವೆಚ್ಚದಲ್ಲಿ ಇದು ಸಿದ್ಧವಾಗಿದೆ. ಚೀನಾದಿಂದ ಆಮದು ಮಾಡಿಕೊಳ್ಳಲು ಒಂದು ಸ್ಕ್ವಾಬ್ ಟೆಸ್ಟ್ ಉಪಕರಣಕ್ಕೆ 17ರೂ ಖರ್ಚಾಗುತ್ತಿದ್ದರೆ, ಭಾರತದಲ್ಲಿ ಅದು ಕೇವಲ 2 ರೂಪಾಯಿಗಳಿಗೆ ಸಿದ್ಧವಾಗುತ್ತಿದೆ.
ಈ ಸ್ಕ್ವಾಬ್ ಟೆಸ್ಟ್ ಉಪಕರಣವನ್ನು ಸ್ವದೇಶಿ ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್.ಐ. ಎಲ್) ಮತ್ತು ಜಾನ್ಸನ್ ಆ್ಯಂಡ್ ಜಾನ್ಸನ್ ಅವರ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ಟೆಕ್ಸ್ಟೈಲ್ ಸಚಿವಾಲಯದೊಂದಿಗೆ ಸಾಮಾಜಿಕ ಒಪ್ಪಂದದ ಭಾಗವಾಗಿ ತಯಾರಿಸಲಾಗಿದೆ.
ಕೊರೋನಾ ಸೋಂಕು ಪತ್ತೆ ಹಚ್ಚಲು ನಡೆಸುವ ವ್ಯಕ್ತಿಯ ಗಂಟಲ ದ್ರವ ಮಾದರಿಯ ಪರೀಕ್ಷೆ ಮಾಡಲು ಸ್ಕ್ವಾಬ್ ಟೆಸ್ಟ್ ಉಪಕರಣವನ್ನು ಬಳಸುತ್ತಾರೆ. ಜಗತ್ತಿನ ಹಲವು ರಾಷ್ಟ್ರಗಳು ಸ್ಕ್ವಾಬ್ ಟೆಸ್ಟ್ ಉಪಕರಣ ಮತ್ತು ಕೊರೊನಾಗೆ ಸಂಬಂಧಿಸಿದ ವೈದ್ಯಕೀಯ ಉಪಕರಣಗಳಿಗೆ ಚೀನಾದ ಮೇಲೆ ಅವಲಂಬಿತವಾಗಿದ್ದು, ಭಾರತ ತಾನೇ ಸಿದ್ಧಪಡಿಸಿರುವುದು ಮಹತ್ವದ ಸಾಧನೆಯಾಗಿದೆ.
ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ತಮ್ಮ ಟ್ವಿಟರ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಭಾರತ ಮತ್ತೊಮ್ಮೆ ಕೊರೊನಾ ಸೋಂಕು ಎದುರಿಸುವ ಮತ್ತು ಎಲ್ಲಾ ಅಡೆ ತಡೆಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಸಾಬೀತು ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.








