ಜನವರಿ 10ರಿಂದ ಮುಷ್ತಾಕ್ ಆಲಿ ಟಿ-ಟ್ವೆಂಟಿ ಟೂರ್ನಿ ಶುರು..!
ಅಂತು ಇಂತು ಭಾರತದಲ್ಲಿ ಜನವರಿ 10ರಿಂದ ದೇಸಿ ಕ್ರಿಕೆಟ್ ಟೂರ್ನಿ ಶುರುವಾಗುತ್ತಿದೆ. ಪ್ರತಿಷ್ಠಿತ ಸೈಯ್ಯದ್ ಮುಷ್ತಾಕ್ ಆಲಿ ಟಿ-ಟ್ವೆಂಟಿ ಟೂರ್ನಿಯ ವೇಳಾಪಟ್ಟಿ ನಿಗದಿಯಾಗಿದೆ.
ಜನವರಿ 10ರಿಂದ 31ರವರೆಗೆ ಭಾರತದ ಆರು ತಾಣಗಳಲ್ಲಿ ಮುಷ್ತಾಕ್ ಆಲಿ ಟಿ-ಟ್ವೆಂಟಿ ಟೂರ್ನಿಯನ್ನು ಆಯೋಜಿಸಲಾಗುವುದು. ಟೂರ್ನಿಯಲ್ಲಿ ಒಟ್ಟು 38 ತಂಡಗಳು ಸ್ಪರ್ಧಿಸಲಿವೆ. ಜನವರಿ 2ರೊಳಗೆ ಎಲ್ಲಾ ತಂಡಗಳು ನಿಗದಿ ಪಡಿಸಿದ ತಾಣದಲ್ಲಿರಬೇಕು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
ಅದೇ ರೀತಿ ಬಿಸಿಸಿಐನ ಕೋವಿಡ್ ಮಾರ್ಗಸೂಚಿಯನ್ನು ಪರಿಪಾಲಿಸಬೇಕಾಗುತ್ತದೆ. ತಂಡಗಳ ಆಟಗಾರರು ಏಳುದಿನಗಳ ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ. ಈ ಪಂದ್ಯಗಳು ಕೂಡ ಜೈವಿಕ ಸುರಕ್ಷತೆಯಡಿಯಲ್ಲಿ ನಡೆಯಲಿದೆ.
ಇನ್ನು ಈ ಟೂರ್ನಿಯ ಪಂದ್ಯಗಳು ಉತ್ತರ ಭಾರತದಲ್ಲಿ ನಡೆಯುವುದು ಅನುಮಾನವಾಗಿದೆ. ಜನವರಿ ತಿಂಗಳಿನಲ್ಲಿ ಉತ್ತರ ಭಾರತದಲ್ಲಿ ದಟ್ಟವಾದ ಮಂಜು ಆವರಿಸಿಕೊಳ್ಳುತ್ತಿರುವುದರಿಂದ ಪಂದ್ಯಗಳು ದಕ್ಷಿಣ ಭಾರತದ ತಾಣದಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಟೂರ್ನಿಯ ತಾಣಗಳನ್ನು ಬಿಸಿಸಿಐ ಇನ್ನೂ ಕೂಡ ಅಂತಿಮಗೊಳಿಸಿಲ್ಲ.
ಅಂದ ಹಾಗೇ ಈ ಬಾರಿಯ ಮಷ್ತಾಕ್ ಆಲಿ ಟೂರ್ನಿಯಲ್ಲಿ ಎಲೈಟ್ ಗ್ರೂಪ್ ಮತ್ತು ಪ್ಲೇ ಗ್ರೂಪ್ ಅಂತ ವಿಂಗಡನೆ ಮಾಡಲಾಗುವುದಿಲ್ಲ. ಒಟ್ಟು 38 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಪಂದ್ಯಗಳನ್ನು ಆಡಿಸಲಾಗುವುದು.
ಈ ಕುರಿತು ಈಗಾಗಲೇ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬಿಸಿಸಿಐ ಪತ್ರವನ್ನು ರವಾನಿಸಿದೆ. ಕೋವಿಡ್-19ನಿಂದಾಗಿ ಕಳೆದ ಮಾರ್ಚ್ ನಿಂದ ಭಾರತದಲ್ಲಿ ಕ್ರಿಕೆಟ್ ಪಂದ್ಯಗಳು ಸ್ಥಗಿತಗೊಂಡಿದ್ದವು. ಹೀಗಾಗಿ ಪ್ರತಿಷ್ಠಿತ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು. ಇದೀಗ 2021ರಿಂದ ಭಾರತದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜನೆ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ.








