ಇಂಡೋ ಆಸೀಸ್ ಮೊದಲ ಟೆಸ್ಟ್ – ಟೀಮ್ ಇಂಡಿಯಾದ 11ರ ಬಳಗಕ್ಕೆ ಬಿರುಸಿನ ಸ್ಪರ್ಧೆ..!
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಡಿಸೆಂಬರ್ 17ರಿಂದ ಆರಂಭವಾಗಲಿದೆ. ಆಡಿಲೇಡ್ ನಲ್ಲಿ ನಡೆಯಲಿರುವ ಹೊನಲುಬೆಳಕಿನ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.
ಈ ನಡುವೆ ಟೀಮ್ ಇಂಡಿಯಾದ 11 ರ ಬಳಗದ ಆಯ್ಕೆಯೂ ಟೀಮ್ ಮ್ಯಾನೇಜ್ ಮೆಂಟ್ಗೆ ದೊಡ್ಡ ತಲೆನೋವಾಗಿದೆ.
ಆರು ಬ್ಯಾಟ್ಸ್ ಮೆನ್ ಗಳು, ಐವರು ಬೌಲರ್ ಗಳನ್ನು ಕಣಕ್ಕಿಳಿಸಬೇಕಾ ಅಥವಾ ಏಳು ಬ್ಯಾಟ್ಸ್ ಮೆನ್ ಗಳು ಮತ್ತು ನಾಲ್ಕು ಬೌಲರ್ ಗಳನ್ನು ಕಣಕ್ಕಿಳಿಸಬೇಕಾ ಅನ್ನೋ ಗೊಂದಲ ಟೀಮ್ ಇಂಡಿಯಾದಲ್ಲಿದೆ.
ವಿರಾಟ್ ಕೊಹ್ಲಿ, ಅಜ್ಯಂಕ್ಯಾ ರಹಾನೆ, ಕೆ.ಎಲ್. ರಾಹುಲ್, ಜಸ್ಪ್ರಿತ್ ಬೂಮ್ರಾ, ಮಹಮ್ಮದ್ ಶಮಿ, ಆರ್. ಅಶ್ವಿನ್ ಸ್ಥಾನ ಭದ್ರವಾಗಿದೆ. ಇನ್ನುಳಿದ ಐದು ಸ್ಥಾನಗಳಿಗೆ ಭಾರೀ ಪೈಪೋಟಿ ನಡೆಯಲಿದೆ.
ಇನ್ನು ಆರಂಭಿಕ ಸ್ಥಾನಕ್ಕಾಗಿ ಶಿಖರ್ ಧವನ್, ಮಯಾಂಕ್ ಅಗರ್ ವಾಲ್ ಮತ್ತು ಪೃಥ್ವಿ ಶಾ ನಡುವೆ ಭಾರೀ ಸ್ಪರ್ಧೆ ಇದೆ. ಅದೇ ರೀತಿ ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ ಮತ್ತು ಹನುಮ ವಿಹಾರಿ ನಡುವೆ ಬಿರುಸಿನ ಸ್ಪರ್ಧೆ ಇದೆ. ಪೂಜಾರ ಅನುಭವ ಮತ್ತು ಹನುಮ ವಿಹಾರಿ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಒಂದು ವೇಳೆ, ಆರು ಬ್ಯಾಟ್ಸ್ ಮೆನ್ ಗಳನ್ನು ಕಣಕ್ಕಿಳಿಸುವುದಾದ್ರೆ ಪೂಜಾರ 11 ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
ಹಾಗೇ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಯಾರನ್ನು ಆಯ್ಕೆ ಮಾಡಬೇಕು ಅನ್ನೋ ಪ್ರಶ್ನೆ ಎದುರಾಗಿದೆ.
ರಿಷಬ್ ಪಂತ್ ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಇನ್ನೊಂದೆಡೆ ಮೊದಲ ಅಭ್ಯಾಸ ಪಂದ್ಯದಲ್ಲಿ ವೃದ್ದಿಮಾನ್ ಸಾಹ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ವಿಕೆಟ್ ಕೀಪರ್ ಸ್ಥಾನಕ್ಕೂ ಸ್ಪರ್ಧೆ ಇದೆ.
ಇನ್ನೊಂದೆಡೆ, ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರಿತ್ ಬೂಮ್ರಾ, ಮಹಮ್ಮದ್ ಸಮಿ ಜೊತೆ ಮೂರನೇ ವೇಗಿಯಾಗಿ ಯಾರು ಕಣಕ್ಕಿಳಿಯುತ್ತಾರೆ ಎಂಬ ಪ್ರಶ್ನೆ ಕೂಡ ಎದುರಾಗಿದೆ. ಮಹಮ್ಮದ್ ಸಿರಾಜ್ ಮತ್ತು ನವದೀಪ್ ಸೈನಿ ಪೈಕಿ ಒಬ್ಬರು 11 ರ ಬಳಗದಲ್ಲಿ ಸ್ಥಾನ ಪಡೆದುಕೊಳ್ಳಬಹುದು.
ಅದೇ ರೀತಿ ಆಲ್ ರೌಂಡರ್ ಕೋಟಾದಲ್ಲಿ ವಾಷಿಂಗ್ಟನ್ ಸುಂದರ್ ಕೂಡ ಸ್ಪರ್ಧೆಯಲ್ಲಿದ್ದಾರೆ.
ಒಟ್ಟಿನಲ್ಲಿ ಟೀಮ್ ಇಂಡಿಯಾದ 11 ರಬಳಗದಲ್ಲಿ ಯಾವ ಯಾವ ಆಟಗಾರ ಕಾಣಿಸಿಕೊಳ್ಳುತ್ತಾರೆ ಅನ್ನೋ ಕುತೂಹಲ ಈಗ ಕ್ರಿಕೆಟ್ ಅಭಿಮಾನಿಗಳಲ್ಲಿದೆ. ಅದೇ ರೀತಿ ಟೀಮ್ ಮ್ಯಾನೇಜ್ ಮೆಂಟ್ ಕೂಡ ಬಹಳ ಎಚ್ಚರಿಕೆಯಿಂದ 11ರ ಬಳಗವನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.