ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕಾಗಿ ಜಾರಿ ಮಾಡಲಾಗಿದ್ದ ಲಾಕ್ ಡೌನ್ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ನಾಲ್ಕು ದೇಶಗಳ ಲಾಕ್ ಡೌನ್ ಮತ್ತು ಕೋವಿಡ್-19 ಪ್ರಕರಣಗಳ ಜೊತೆ ಭಾರತದ ಲಾಕ್ ಡೌನ್ ಹೋಲಿಕೆ ಮಾಡಿರುವ ಗ್ರಾಫ್ ಪೋಸ್ಟ್ ಮಾಡಿದ್ದಾರೆ. ವಿಫಲವಾದ ಲಾಕ್ ಡೌನ್ ಈ ರೀತಿ ಕಾಣುತ್ತದೆ ಎಂದು ಬರೆದುಕೊಂಡಿದ್ದಾರೆ.
ಆರಂಭದಲ್ಲಿ ಕೊರೊನಾ ವೈರಸ್ ದಾಳಿಗೆ ತುತ್ತಾಗಿದ್ದ ಸ್ಪೇನ್, ಜರ್ಮನಿ, ಇಟಲಿ ಹಾಗೂ ಬ್ರಿಟನ್‌ನಲ್ಲಿ ಲಾಕ್‌ಡೌನ್ ಘೋಷಣೆಯಾದ ನಂತರ ಪ್ರಕರಣಗಳು ಇಳಿಮುಖವಾಗಿವೆ. ಆದರೆ ಭಾರತದಲ್ಲಿ ಮಾತ್ರ ಲಾಕ್ ಡೌನ್ ತೆರವು ನಂತರವೂ ಸೋಂಕು ತೀವ್ರವಾಗಿದೆ ಎಂದಿದ್ದಾರೆ.
ಇನ್ನು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಒಂದೇ ದಿನ 9,887 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗುವುದರೊಂದಿಗೆ 294 ಜನರು ಮೃತಪಟ್ಟಿದ್ದರು. ಈ ಮೂಲಕ ಸೋಂಕಿತರ ಸಂಖ್ಯೆ 2,36,657ಕ್ಕೆ ಏರಿಕೆಯಾಗಿದ್ದರೆ, ಒಟ್ಟಾರೆ 6,642 ಜನರು ಮೃತಪಟ್ಟಿದ್ದಾರೆ








