ನವದೆಹಲಿ : ಮಹಾಮಾರಿ ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯಲು ಸರ್ಕಾರ ಹಲವು ರೀತಿಯ ಕ್ರಮಗಳನ್ನು ತೆಗೆದುಕೊಂಡರೂ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9ಗಂಟೆವರೆಗೆ ಮನೆಯಿಂದ ಹೊರ ಬರದೆ ಜನತಾ ಕರ್ಫ್ಯೂ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಏತನ್ಮಧ್ಯೆ ದೇಶದಲ್ಲಿ ಕೋವಿಡ್-19 ಪೀಡಿತರ ಸಂಖ್ಯೆ 223ಕ್ಕೆ ಏರಿದೆ. ಇದರಲ್ಲಿ ವಿದೇಶಿ ಪ್ರಜೆಗಳ ಸಂಖ್ಯೆ 32 ಎಂದು ವರದಿ ತಿಳಿಸಿದೆ.
ವಾರದ ಹಿಂದೆ ದೇಶದಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದ್ದು, ಈವರೆಗೆ ಕೋವಿಡ್ 19 ಸೋಂಕಿಗೆ ಸಾವಿಗೀಡಾದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಈ ನಿಟ್ಟಿನಲ್ಲಿ ಭಾನುವಾರದ ಜನತಾ ಕರ್ಫ್ಯೂಗೆ ಕೈಜೋಡಿಸುವಂತೆ ಆರೋಗ್ಯ ಸಚಿವಾಲಯ ಮನವಿ ಮಾಡಿಕೊಂಡಿದೆ.
ಇನ್ನೊಂದೆಡೆ ಕೋವಿಡ್ 19 ಸೋಂಕು ಬಗ್ಗೆ ಯಾವುದೇ ಪ್ರಶ್ನೆಗಳಿದ್ದರೆ ಜನರು 1075 ಟೋಲ್ ಫ್ರೀ ನಂಬರ್ ಗೆ ಕರೆ ಮಾಡುವಂತೆ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.








