ಶತಾಯುಷಿ ಕ್ರಿಕೆಟಿಗ ವಸಂತ್ ರೈಜಿ ನಿಧನ
ಶತಾಯುಷಿ ಹಾಗೂ ದೇಸಿ ಕ್ರಿಕೆಟಿಗ ವಸಂತ್ ರೈಜಿ ಅವರು ಇಂದು ನಿಧನರಾಗಿದ್ದಾರೆ. ಭರ್ತಿ ನೂರು ವರ್ಷ ಬದುಕಿದ್ದರು. ವಯೋಸಹಜ ಖಾಯಿಲೆಯಿಂದಾಗಿ ಅವರು ಶನಿವಾರ ರಾತ್ರಿ 2.20ರ ವೇಳೆಗೆ ದಕ್ಷಿಣ ಮುಂಬೈನ ವಾಲ್ಕೇಶ್ವರದಲ್ಲಿರುವ ತಮ್ಮ ನಿವಾಸದಲ್ಲೇ ಅಸು ನೀಗಿದ್ದಾರೆ ಎಂದು ಅವರ ಅಳಿಯ ಸುದರ್ಶನ್ ನಾನಾವಾಟಿ ತಿಳಿಸಿದ್ದಾರೆ.
ವಸಂತ್ ರೈಜಿ ಅವರು ಬಲಗೈ ಬ್ಯಾಟ್ಸ್ ಮೆನ್ ಆಗಿದ್ದು, 9 ಪ್ರಥಮ ದರ್ಜೆಯ ಪಂದ್ಯಗಳನ್ನು ಆಡಿದ್ದಾರೆ. 1939ರಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಪರ ಮೊದಲ ಪ್ರಥಮ ದರ್ಜೆಯ ಪಂದ್ಯವನ್ನು ಕೇಂದ್ರ ಪ್ರಾಂತಿಯ ವಿರುದ್ಧ ಆಡಿದ್ದರು. ನಾಗ್ಪುರದಲ್ಲಿ ನಡೆದ ಆ
ಪಂದ್ಯದಲ್ಲಿ ರೈಜಿ ಅವರು ಡಕೌಟ್ ಆಗಿದ್ದರು. ಹಾಗೇ ಎರಡನೇ ಇನಿಂಗ್ಸ್ ನಲ್ಲಿ ಒಂದು ರನ್ ಗಳಿಸಿದ್ದರು. ಆದಾದ ನಂತರ ರೈಜಿ ಅವರು ಕ್ರಿಕೆಟ್ ಆಟವನ್ನು ಗಂಭೀರವಾಗಿ ಪರಿಗಣಿಸಿದ್ದರು.
ಪರಿಣಾಮ, 1941ರಲ್ಲಿ ಮುಂಬೈ (ಆಗೀನ ಬಾಂಬೆ) ತಂಡದ ಪರ ಹಾಗೂ 1944ರಲ್ಲಿ ಬರೋಡಾ ತಂಡದ ಪರ ಆಡಿದ್ದರು. 9 ಪಂದ್ಯಗಳಲ್ಲಿ ಅವರು 277 ರನ್ ಗಳಿಸಿದ್ದರು. ಇದ್ರಲ್ಲಿ ಎರಡು ಅರ್ಧಶತಗಳಿವೆ. 1944ರಲ್ಲಿ ಮಹಾರಾಷ್ಟ್ರ ವಿರುದ್ಧ ಆಕರ್ಷಕ 68 ರನ್
ಗಳಿಸಿ ಬರೋಡಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲ, ಲಾಲ್ ಅಮರನಾಥ್, ವಿಜಯ್ ಮರ್ಚೆಂಟ್, ಸಿ.ಕೆ. ನಾಯ್ಡು, ವಿಜಯ ಹಜಾರೆ ಮೊದಲಾದ ಅಪ್ರತಿಮ ಕ್ರಿಕೆಟಿಗರ ಜೊತೆಗೂ ಆಡಿದ್ದರು.
ಪ್ರಥಮ ದರ್ಜೆಯ ಕ್ರಿಕೆಟ್ ನಿವೃತ್ತಿಯ ಬಳಿಕ ಬ್ಯಾಟ್ ಬದಲು ಕೈಯಲ್ಲಿ ಪೆನ್ನು ಹಿಡಿದಿದ್ದ ವಸಂತ್ ರೈಜಿ ಅವರು ಅನೇಕ ಲೇಖನಗಳು, ಪುಸ್ತಕಗಳನ್ನು ಬರೆದಿದ್ದಾರೆ. ವೃತ್ತಿಯಲ್ಲಿ ಚಾರ್ಟೆಡ್ ಆಕೌಟೆಂಟ್ ಕೂಡ ಆಗಿರುವ ರೈಜಿ ಅವರಿಗೆ ಕ್ರಿಕೆಟ್ ಮೇಲೆ ಅಪಾರವಾದ ಪ್ರೀತಿ ಇತ್ತು. ಹೀಗಾಗಿ ಕ್ರಿಕೆಟ್ಗೆ
ಸಂಬಂಧಪಟ್ಟಂತಹ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಸಿ.ಕೆ. ನಾಯ್ಡು, ವಿಕ್ಟರ್ ಟ್ರಂಪರ್, ಎಲ್.ಪಿ. ಜೈ ಮೊದಲಾದ ಕ್ರಿಕೆಟಿಗರ ಬಗ್ಗೆ ಪುಸ್ತಕಗಳು ಇವರ ಬರವಣಿಗೆಯಲ್ಲಿ ಮೂಡಿ ಬಂದಿವೆ.
ಜಾಲಿ ಕ್ರಿಕೆಟ್ ಕ್ಲಬ್ ನ ಸ್ಥಾಪಕ ಸದಸ್ಯರಾಗಿದ್ದ ವಸಂತ್ ರೈಜಿ ಅವರು ಟಿವಿಯಲ್ಲಿ ಇಳಿ ವಯಸ್ಸಿನಲ್ಲೂ ಪಂದ್ಯಗಳನ್ನು ನೋಡ್ತಾ ಇದ್ದರು.
2020ರ ಜನವರಿ 20ರಂದು ತನ್ನ ನೂರನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಸ್ಟೀವ್ ವಾ ಅವರು ಭೇಟಿ ಮಾಡಿದ್ದರು. ಕ್ರಿಕೆಟ್ ಇತಿಹಾಸಕಾರನೂ ಆಗಿರುವ ವಸಂತ್ ರೈಜಿ ಅವರಿಗೆ ಸಿ,ಕೆ. ನಾಯ್ಡು ನೆಚ್ಚಿನ ಕ್ರಿಕೆಟಿಗರಾಗಿದ್ದರು.








