ಕೋವಿಡ್-19: ಭಾರತ – ಶ್ರೀಲಂಕಾ ನಡುವಿನ ಏಕದಿನ ಸರಣಿ ಅಸಾಧ್ಯ
ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ರೆ ಇಷ್ಟು ಹೊತ್ತಿಗೆ ಟೀಮ್ ಇಂಡಿಯಾ ಮತ್ತು ಶ್ರೀಲಂಕಾ ತಂಡಗಳು ಅಭ್ಯಾಸದಲ್ಲಿ ನಿರತವಾಗಬೇಕಿದ್ದವು. ಆದ್ರೆ ಕೊರೋವಾ ಮಹಾಮಾರಿ ಎಲ್ಲದಕ್ಕೂ ಬ್ರೇಕ್ ಹಾಕಿದೆ. ಹೀಗಾಗಿ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ನಡೆಯಬೇಕಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಹಾಗೂ ಟಿ-ಟ್ವೆಂಟಿ ಸರಣಿಗಳನ್ನು ಸ್ಥಗಿತಗೊಳಿಸಲಾಗಿದೆ.
ಬಿಸಿಸಿಐ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಗಳು ಪರಸ್ಪರ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿದೆ. ಜೂನ್ ಕೊನೆಯ ವಾರದಿಂದ ಜುಲೈ ತನಕ ಮೂರು ಏಕದಿನ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳನ್ನು ನಿಗದಿಮಾಡಲಾಗಿತ್ತು. ಆದ್ರೆ ದಿನಾಂಕವನ್ನು ನಿಗದಿ ಮಾಡಿರಲಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಶ್ರೀಲಂಕಾ ಪ್ರವಾಸ ಮಾಡಲು ಸಾಧ್ಯವಿಲ್ಲ. ಹಾಗೂ ಟೂರ್ನಿಗಳನ್ನು ಆಡುವುದು ಕೂಡ
ಅಸಾಧ್ಯ. ಈ ಬಗ್ಗೆ ನಾವು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಜೊತೆ ಚರ್ಚಿಸಿದ್ದೇವೆ. ಮುಂಬರುವ ದಿನಗಳಲ್ಲಿ ಈ ಸರಣಿ ನಡೆಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಬಿಸಿಸಿಐ ಕೋಶಾಧಿಕಾರಿ ಅರುಣ್ ಧೂಮಲ್ ಹೇಳಿದ್ದಾರೆ.
ಈ ಸರಣಿ ರದ್ದುಗೊಳ್ಳುವುದು ಖಚಿತವಾಗಿತ್ತು. ಯಾಕಂದ್ರೆ ಟೀಮ್ ಇಂಡಿಯಾ ಆಟಗಾರರು ಇನ್ನೂ ಕೂಡ ತರಬೇತಿ ಶಿಬಿರದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಈಗಾಗಲೇ ಸುಮಾರು ಎಂಟು ಸಾವಿರ ಮಂದಿ ಸಾವಿಗಿಡಾಗಿದ್ದಾರೆ.
ಆಟಗಾರರು ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಬೇಕಾದ್ರೆ ಕನಿಷ್ಠ ನಾಲ್ಕರಿಂದ ಆರು ವಾರಗಳ ತನಕ ಅಭ್ಯಾಸ ನಡೆಸಬೇಕಾಗಿದೆ. ಕಳೆದ ಎರಡೂವರೆ ತಿಂಗಳುಗಳಿಂದ ಕ್ರಿಕೆಟಿಗರು ಮನೆಯಲ್ಲೇ ಇದ್ದಾರೆ. ಅದೂ ಅಲ್ಲದೆ ಅಂತಾರಾಷ್ಟ್ರೀಯ ಪ್ರವಾಸಕ್ಕೆ ಅನುಮತಿ ಸಿಗುತ್ತೆ ಅನ್ನೋದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಹೀಗಾಗಿ ಜೂನ್ ಮತ್ತು ಜುಲೈನಲ್ಲಿ ಶ್ರೀಲಂಕಾ ಪ್ರವಾಸ ನಡೆಸುವುದು ಅಸಾಧ್ಯ ಅಂತ ಅರುಣ್ ಧೂಮಾಲ್ ಹೇಳಿದ್ದಾರೆ.
ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಕೊರೋನಾ ವೈರಸ್ ನಿಂದಾಗಿ ಶ್ರೀಲಂಕಾ ಪ್ರವಾಸ ಮಾಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಹಾಗೇ ಸರಣಿ ನಡೆಸುವ ಬಗ್ಗೆ ಮುಂದಿನ ದಿನಗಳ ವೇಳಾಪಟ್ಟಿಯನ್ನು ನೋಡಿಕೊಂಡು ನಿರ್ಧಾರ ಮಾಡಲಾಗುವುದು ಎಂದು ಭರವಸೆ ನೀಡಿದೆ. ಕ್ರಿಕೆಟ್ಗೆ ಸಂಬಂಧಪಟ್ಟಂತೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ್ರೂ ಭಾರತ ಸರ್ಕಾರದ ಮಾರ್ಗದರ್ಶನ ಬೇಕಿದೆ ಎಂದು ಬಿಸಿಸಿಐ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ತಿಳಿಸಿದೆ.
ಈಗಾಗಲೇ ಭಾರತದಲ್ಲಿ ಐಪಿಎಲ್ ಟೂರ್ನಿ ಮುಂದೂಡಲಾಗಿದೆ. ಹಾಗೇ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯೂ ಸ್ಥಗಿತಗೊಂಡಿದೆ. ಈ ಹಿಂದೆ ನಿಗದಿಯಾದಂತೆ ಮಾರ್ಚ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಡಬೇಕಿತ್ತು. ಜೊತೆಗೆ ಐಪಿಎಲ್ ಟೂರ್ನಿಯನ್ನು ಆಡಬೇಕಿತ್ತು. ಒಟ್ಟಾರೆ ಕೋವಿಡ್-19ನಿಂದಾಗಿ ಭಾರತದ ಎರಡು ಸರಣಿಗಳು ಮೊಟಕುಗೊಂಡಿವೆ.








