ಬೆಂಗಳೂರು: ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್ ನಲ್ಲಿ ಉಪಹಾರ ಮತ್ತು ತಿಂಡಿಯ ಬೆಲೆ ಏರಿಕೆಯಾಗಲಿದೆ. ರಾಜ್ಯ ಸರ್ಕಾರ ಕಳೆದ ಒಂದು ವರ್ಷದಿಂದ ಅನುದಾನ ನೀಡದಿರುವ ಹಿನ್ನೆಲೆಯಲ್ಲಿ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಲು ಬಿಬಿಎಂಪಿ ಇಂದಿರಾ ಕ್ಯಾಂಟೀನ್ ತಿಂಡಿ ಮತ್ತು ಊಟದ ಬೆಲೆ ಹೆಚ್ಚಳಕ್ಕೆ ಮುಂದಾಗಿದೆ.
ಸದ್ಯ ಒಂದು ಊಟಕ್ಕೆ ಗುತ್ತಿಗೆದಾರರು 22 ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ. ಈ ಪೈಕಿ ಸರ್ಕಾರ 12 ರೂಪಾಯಿ ಭರಿಸಿ, ಗ್ರಾಹಕರಿಗೆ 10 ರೂಪಾಯಿಗೆ ನೀಡಲಾಗುತ್ತಿದೆ. ಪ್ರತಿ ಊಟಕ್ಕೆ 12 ರೂಪಾಯಿ ಸಬ್ಸಿಡಿ ಭರಿಸುತ್ತಿರುವುದು ದೊಡ್ಡ ಹೊರೆಯಾಗಿದೆ.ಹೀಗಾಗಿ, ಬಿಬಿಎಂಪಿ ಈ ಬಾರಿ ಇಂದಿರಾ ಕ್ಯಾಂಟೀನ್ ಗೆ ಹೊಸದಾಗಿ ಟೆಂಡರ್ ಆಹ್ವಾನಿಸಿದೆ. ಹೊಸ ಗುತ್ತಿಗೆ ಜೊತೆ ಹೊಸ ದರ ಜಾರಿಗೆ ತರಲು ಚಿಂತನೆ ನಡೆದಿದೆ.
ಹಾಲಿ ದರ.
ಬೆಳಗ್ಗಿನ ತಿಂಡಿ 5 ರೂಪಾಯಿ. ಊಟ 10 ರೂಪಾಯಿ.
ಪರಿಷ್ಕೃತ ದರ.
ಬೆಳಗ್ಗಿನ ತಿಂಡಿ 10 ರೂಪಾಯಿ. ಊಟ 15 ರೂಪಾಯಿ.
ಅಂದರೆ ನೂತನ ಗುತ್ತಿಗೆಯೊಂದಿಗೆ ಹೊಸ ದರವನ್ನು ಜಾರಿಗೆ ತರಲು ಬಿಬಿಎಂಪಿ ಸಿದ್ಧತೆ ನಡೆಸುತ್ತಿದೆ. ಬೆಳಗಿನ ಉಪಹಾರದ ದರ 5 ರಿಂದ 10 ಹಾಗೂ ಊಟದ ದರ 10 ರಿಂದ 15 ಏರಿಕೆಯಾಗುವ ಸಾಧ್ಯತೆಯಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಬಡ ಜನರ ಹಸಿವು ನೀಗಿಸಲು ನಾಗರಿಕರಿಗೆ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ವಿತರಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಯಿತು.








