ಬೆಳಗಾವಿ : ವಲಸೆ ಕಾರ್ಮಿಕರಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದ ವಿಚಾರವಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪ್ರತಿಕ್ರಿಯಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಸ್ ನಲ್ಲಿ ಕಡಿಮೆ ಜನರನ್ನು ಕಳಿಸಬೇಕಾಗುತ್ತೆ. ಕಾರ್ಮಿಕರನ್ನು ಅವರ ಊರಿಗೆ ಬಿಟ್ಟು ವಾಪಸ್ ಬರುವಾಗ ಬಸ್ ಖಾಲಿ ಬರಬೇಕಾಗುತ್ತೆ. ಆದರೂ ಈ ಹೊರೆ ಸಹಿಸಿಕೊಂಡು ಒಂದು ಕಡೆ (ಸಿಂಗಲ್ ಫೇರ್) ಹೋಗುವ ಟಿಕೆಟ್ ದರ ಪಡೆಯಲಾಗುತ್ತೆ. ಈಗಾಗಲೇ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಸಹಾಯ ಮಾಡಿದ್ದೇವೆ. ಕೊರೊನಾದಿಂದ ಇಡೀ ವಿಶ್ವಕ್ಕೆ ಕಂಟಕವಾಗಿದೆ. ಇದು ಎಲ್ಲರೂ ಕೂಡ ಹೊರಬೇಕಾಗಿರುವ ಭಾರ, ಸ್ವಲ್ಪ ಸಹಿಸಿಕೊಳ್ಳಬೇಕಾಗುತ್ತೆ ಅನ್ನೋ ಮೂಲಕ ಉಚಿತ ಪ್ರಯಾಣ ಅಸಾಧ್ಯ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಇದಲ್ಲದೆ ‘ಮಾರಕ ರೋಗ ಕೋವಿಡ್-19 ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿರುವ ಹಾಟ್‌ಸ್ಪಾಟ್ ಪ್ರದೇಶಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಬಸ್ ಸಂಚಾರ ಆರಂಭಿಸುವ ಚಿಂತನೆ ನಡೆದಿದೆ’ ಎಂದರು. ಇನ್ನು ಮೇ 4ರಿಂದ ಕೊರೊನಾ ಹಾಟ್‌ಸ್ಪಾಟ್ ತಾಲೂಕು ಹೊರತುಪಡಿಸಿ ಆಯಾ ತಾಲೂಕುಗಳ ವ್ಯಾಪ್ತಿಯಲ್ಲೇ ಸಾರಿಗೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತೆ ಎಂದು ಮಾಹಿತಿ ನೀಡಿದ ಸವದಿ, ಹೊರ ರಾಜ್ಯದ ಕಾರ್ಮಿಕರನ್ನು ರಾಜ್ಯಕ್ಕೆ ಕರೆತಂದ ಮೇಲೆ ಕ್ವಾರಂಟೈನ್‌ನಲ್ಲಿ ಇರಿಸಬೇಕಾಗುತ್ತೆ. ಈ ಕುರಿತು ಇನ್ನೆರಡು ದಿನಗಳಲ್ಲಿ ನಿರ್ಧರಿಸಲಾಗುತ್ತೆ ಎಂದು ತಿಳಿಸಿದ್ದಾರೆ.