ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ಸ್ಯಾಂಡಲ್‍ವುಡ್ ನಟ-ನಟಿಯರ ಬಗ್ಗೆ ಮಾಹಿತಿ ನೀಡಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್‍ಗೆ ನಾಳೆ ಮತ್ತೊಮ್ಮೆ ನೋಟಿಸ್ ನೀಡಲು ಸಿಸಿಬಿ ಪೊಲೀಸರು ತೀರ್ಮಾನಿಸಿದ್ದಾರೆ.
ಸೋಮವಾರ ವಿಚಾರಣೆಗೆ ಹಾಜರಾಗಿದ್ದ ಇಂದ್ರಜಿತ್ ಲಂಕೇಶ್, ಡ್ರಗ್ಸ್ ಜಾಲದಲ್ಲಿರುವ ಸ್ಯಾಂಡಲ್‍ವುಡ್ ನಟ-ನಟಿಯರು, ಸಂಗೀತ ನಿರ್ದೇಶಕರ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಯಾವುದೇ ಪೂರಕ ದಾಖಲೆಗಳನ್ನು ನೀಡಿಲ್ಲ. ಹೀಗಾಗಿ ನಾಳೆ ಮತ್ತೊಮ್ಮೆ ಸಿಸಿಬಿ ಪೊಲೀಸರು ನೋಟಿಸ್ ನೀಡಲಿದ್ದಾರೆ.
ಈ ಬಗ್ಗೆ ಖುದ್ದು ಮಾಹಿತಿ ನೀಡಿರುವ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಇಂದ್ರಜಿತ್ ಲಂಕೇಶ್ ಕೇವಲ ಹೇಳಿಕೆ ದಾಖಲಿಸಿದ್ದಾರೆ. ಆದರೆ, ಯಾವುದೇ ದಾಖಲೆ ನೀಡಿಲ್ಲ. ದಾಖಲೆ ಇಲ್ಲದೆ, ಸಾಕ್ಷಿಗಳಿಲ್ಲದೆ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ. ಹೀಗಾಗಿ ದಾಖಲೆ ನೀಡುವಂತೆ ಮತ್ತೊಮ್ಮೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇಂದ್ರಜಿತ್ ಲಂಕೇಶ್ ಕೆಲವರ ಹೆಸರು ಹೇಳಿರುವುದು ನಿಜ. ಆದರೆ, ಅವರು ಯಾವುದೇ ದಾಖಲೆಗಳನ್ನು ನೀಡಿಲ್ಲ. ಹೀಗಾಗಿ ಪುರಾವೆಗಳಿಲ್ಲದೆ ತನಿಖೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಇಂದ್ರಜಿತ್ ಲಂಕೇಶ್‍ಗೆ ದಾಖಲೆ ನೀಡುವಂತೆ ನೋಟಿಸ್ ನೀಡಲಾಗುವುದು ಎಂದು ಸಂದೀಪ್ ಪಾಟೀಲ್ ಹೇಳಿದ್ದಾರೆ.
ಸಿಎಂಗೆ ಬೊಮ್ಮಾಯಿ, ಪ್ರವೀಣ್ ಸೂದ್ ಮಾಹಿತಿ
ಡ್ರಗ್ಸ್ ಜಾಲದ ಬಗ್ಗೆ ನಡೆಯುತ್ತಿರುವ ತನಿಖೆ ಹಾಗೂ ಪ್ರಗತಿ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಡಿಜಿಪಿ ಪ್ರವೀಣ್ ಸೂದ್ ಮುಖ್ಯಮಂತ್ರಿ ಬಿ.ಎಸ್ ಯಡಯೂರಪ್ಪ ಅವರಿಗೆ ವಿವರಣೆ ನೀಡಿದ್ದಾರೆ.
ಸಿಎಂ ನಿವಾಸ ಕಚೇರಿಗೆ ಭೇಟಿ ನೀಡಿರುವ ಬಸವರಾಜ ಬೊಮ್ಮಾಯಿ, ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.








