ಮಾಸ್ಕ್ ಧರಿಸದ ಬೇಜವಾಬ್ದಾರಿಯುತ, ಅಜಾಗರೂಕತೆಯ ಜನರಿಂದ ಭಾರತದಲ್ಲಿ ಸೋಂಕು ಹರಡುತ್ತಿದೆ – ಐಸಿಎಂಆರ್
ಹೊಸದಿಲ್ಲಿ, ಅಗಸ್ಟ್26: ಮಾಸ್ಕ್ ಧರಿಸದ ಜನರು ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಹರಡಿಸುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ತಜ್ಞರು ಹೇಳಿದ್ದಾರೆ.
ಸಾಂಕ್ರಾಮಿಕ ರೋಗವನ್ನು ಯಾರು ಹರಡಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್, ಮಹಾನಿರ್ದೇಶಕ ಬಲರಾಮ ಭಾರ್ಗವ ಅವರು, ಬೇಜವಾಬ್ದಾರಿಯುತ, ಅಜಾಗರೂಕತೆಯ ಜನರು ಮಾಸ್ಕ್ ಧರಿಸದೆ ಭಾರತದಲ್ಲಿ ಸಾಂಕ್ರಾಮಿಕ ರೋಗವನ್ನು ಹರಡುತ್ತಿದ್ದಾರೆ ಎಂದು ಹೇಳಿದರು. ಕೋವಿಡ್ 19 ಸೋಂಕಿಗೆ ಯುವಕರು ಅಥವಾ ವಯಸ್ಸಾದವರು ಒಳಗಾಗುತ್ತಿದ್ದಾರೆ ಎಂದು ನಾನು ಹೇಳಲಾರೆ. ಆದರೆ ಮಾಸ್ಕ್ ಧರಿಸದ ಜನರು ಸೋಂಕಿನವಾಹಕರಾಗಿದ್ದಾರೆ ಎಂದು ಭಾರ್ಗವ ಹೇಳಿದರು.
ಕೊರೋನಾ ಸೋಂಕಿನ ಎರಡನೇ ಅಲೆ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾವು ಹಾಂಗ್ ಕಾಂಗ್‌ನಲ್ಲಿ ಕೊರೋನಾ ಪ್ರಕರಣದ ಎರಡನೇ ಅಲೆ ಕುರಿತು ವರದಿಯನ್ನು ಓದಿದ್ದೇವೆ. ಇದು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಇದು ರೋಗಿಯ ರೋಗನಿರೋಧಕ ಸ್ಥಿತಿಗೆ ಸಂಬಂಧಿಸಿರಬಹುದು, ವೈರಸ್ ರೂಪಾಂತರಗೊಂಡಿದೆಯೆ ಎಂದು ಆಗಿರಬಹುದು. ಆದುದರಿಂದ ನಾವು ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಅನುಸರಿಸಬೇಕಾಗಿದೆ. ಆದರೆ ಅದೇ ಸಮಯದಲ್ಲಿ ನಾವು ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ಅವರು ಸೂಚಿಸಿದರು.