ವಿಧಾನಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಕೊರೊನಾ ತಡೆಗಟ್ಟುವ ಬಗ್ಗೆ ರಾಜ್ಯದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸದನದಲ್ಲಿ ಮಾತನಾಡಿದ ಕೆ.ಸುಧಾಕರ್, ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿದೆ. ವೈದ್ಯಕೀಯ ಶಿಕ್ಷಣ, ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಿಎಂ ಸೂಚನೆ ಕೊಟ್ಟಿದ್ದಾರೆ. ವಿಮಾನ ನಿಲ್ದಾಣ, ಬಂದರುಗಳಲ್ಲಿ ಎರಡು ತಿಂಗಳಿನಿಂದ ತಪಾಸಣೆ ಮಾಡಲಾಗುತ್ತಿದೆ. ಎ,ಬಿ,ಸಿ ಗ್ರೂಪ್ಗಳನ್ನು ಮಾಡಿ ಪ್ರತ್ಯೇಕಗೊಳಿಸಿ ತಪಾಸಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರ ಕೊರೊನಾ ತಡೆಗಟ್ಟಲು 200 ಕೋಟಿ ಹಣವನ್ನು ತೆಗೆದು ಇಟ್ಟಿದೆ. ವಿದೇಶಗಳಿಂದ ಬರುವವರ ಬಲಗೈಗೆ ಸ್ಟಾಂಪ್ ಹಾಕಿ, 15 ದಿನ ಕಡ್ಡಾಯವಾಗಿ ಪ್ರತ್ಯೇಕಗೊಳಿಸಲು ತೀರ್ಮಾನ ಮಾಡಿದ್ದೇವೆ. ಅವರಲ್ಲಿ ಸೋಂಕು ಪತ್ತೆಯಾಗದೆ ಇದ್ದರೂ ಮುಂಜಾಗ್ರತಾ ಕ್ರಮವಾಗಿ ಖಾಸಗಿ ರೆಸಾರ್ಟ್ಸ್, ಹೋಟೆಲ್ ಅಥವಾ ಆಸ್ಪತ್ರೆಗಳಲ್ಲಿ 15 ದಿನ ಅವರನ್ನು ಗೃಹ ಬಂಧನದಲ್ಲಿ ಇಡಲಾಗುತ್ತದೆ. ಮದುವೆ ಸಮಾರಂಭಗಳು 150 ಜನರಿಗೆ ಮಾತ್ರ ಅಡುಗೆ ಮಾಡಬೇಕು. ವಿಧಾನಸೌಧ, ವಿಕಾಸಸೌಧಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಸುಧಾಕರ್ ತಿಳಿಸಿದರು.
ಜಗತ್ತಿನಾದ್ಯಂತ ಒಟ್ಟು 88,881 ಪಾಸಿಟಿವ್ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಆದರಲ್ಲಿ 68,798 ಕೊರೊನಾ ಪೀಡಿತರು ಗುಣಮುಖರಾಗಿದ್ದಾರೆ. ಹಾಗಾಗಿ ಕೊರೊನಾ ಸೋಂಕು ಬಂದ ತಕ್ಷಣ ಸತ್ತು ಹೋಗುತ್ತಾರೆ ಎಂದು ಭಯ ಬೀಳುವುದು ಬೇಡ. ಅಮೆರಿಕ, ಇಟಲಿ, ಸ್ಪೇನ್ ದೇಶಗಳು ಎಚ್ಚರ ತಪ್ಪಿದ್ದವು. ಹಾಗಾಗಿ ಆ ದೇಶಗಳಲ್ಲಿ ಕೊರೊನಾ ಪ್ರಕರಣಗಳು ಬಹಳಷ್ಟು ಇವೆ. ಆ ದೇಶಗಳು ಮೊದಲ ಹಂತ ಬಂದ ಬಳಿಕ ಬಂದ್ ಘೋಷಣೆಯಾಗಿತ್ತು. ರಜೆ ಘೋಷಣೆಯಿಂದ ಸೋಂಕಿತರು ಮಾಲ್ಗಳಿಗೆಲ್ಲಾ ಓಡಾಡಿದರು. ಹಾಗಾಗಿ ಆ ದೇಶಗಳಲ್ಲಿ ಕೊರೊನಾ ವ್ಯಾಪಕವಾಗಿ ಹಬ್ಬಿತ್ತು. ಅವರು ಮಾಡಿದ ತಪ್ಪು ನಾವು ಮಾಡಿಲ್ಲ. ನಮ್ಮಲ್ಲಿ ಇನ್ನು ಎರಡು ಮೂರು ವಾರ ಎಲ್ಲರೂ ಕೊರೊನಾ ನಿಗ್ರಹಕ್ಕೆ ಮುಂದಾಗಬೇಕು. ಜನರ ಬೆಂಬಲ ಸಿಕ್ಕಿದರೆ ಕೊರೊನಾ ತಡೆಗಟ್ಟುವುದರಲ್ಲಿ ಯಶಸ್ವಿ ಆಗಲಿದೆ ಎಂದು ಸುಧಾಕರ್ ಭರವಸೆ ನೀಡಿದರು.
ಈಗಾಗಲೇ ನಾಲ್ವರು ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದ್ದು, ಸಚಿವರಾದ ಡಾ. ಅಶ್ವಥ್ ನಾರಾಯಣ, ಬಸವರಾಜ ಬೊಮ್ಮಾಯಿ, ಶ್ರೀ ರಾಮುಲು ಮತ್ತು ನಾನು ಈ ತಂಡದ ಸದಸ್ಯರಾಗಿದ್ದು, ನಿತ್ಯ ಕೊರೊನಾ ಬಗ್ಗೆ ಮಾಹಿತಿ ತಿಳಿಸಲಿದ್ದೇವೆ.
ಹೊರದೇಶದಿಂದ ಬರುವ ಜನರಿಗೆ ಬಲಗೈಗೆ ಸ್ಟಾಂಪ್ ಹಾಕುತ್ತೇವೆ.15 ದಿನ ಅವರು ಯಾರನ್ನೂ ಸಂಪರ್ಕ ಮಾಡಬಾರದು ಎಂಬ ಆದೇಶ ನೀಡಿದ್ದೇವೆ. ದೇಶದಲ್ಲಿ 54 ಲ್ಯಾಬ್ ಇದ್ದು, ಅದರಲ್ಲಿ 5 ನಮ್ಮ ರಾಜ್ಯದಲ್ಲಿವೆ. ಕರ್ನಾಟಕದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯ ಲ್ಯಾಬ್ ಗಳಿವೆ. ಪ್ರಾದೇಶಿಕ ವಿಭಾಗವಾರು ಲ್ಯಾಬ್ಗಳನ್ನು ಹೆಚ್ಚಳ ಮಾಡಿ ಜಿಲ್ಲೆಗಳಿಗೂ ವಿಸ್ತರಿಸಲು ಚಿಂತನೆ ನಡೆಸಲಾಗಿದ್ದು, ಹುಬ್ಬಳ್ಳಿ, ಮಂಗಳೂರು ಸಹಿತ ಇನ್ನೂ ಕೆಲವು ಕಡೆ ಪ್ರಾದೇಶಿಕ ವಿಭಾಗವಾರು ಲ್ಯಾಬ್ಗಳನ್ನು ತೆರೆಯಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಕೊರೋನಾ ವೈರಸ್ ತಡೆಗಟ್ಟಲು ಹಗಲು ರಾತ್ರಿ ಎನ್ನದೇ ದುಡಿಯುತ್ತಿರುವ ವೈದ್ಯರು, ವೈದ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಮತ್ತು ಎನ್ಜಿಒಗಳಿಗೆ ಪ್ರೋತ್ಸಾಹ ಧನ ಮತ್ತು ವಿಮಾ ಸೌಲಭ್ಯ ನೀಡಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.
ಸುಧಾಕರ್ ಅವರ ಮಾತುಗಳನ್ನು ಆಲಿಸಿದ ನಂತರ ಪ್ರತಿಪಕ್ಷ ಕಾಂಗ್ರೆಸ್ ನ ಸದಸ್ಯರಾದ ಆರ್.ವಿ. ದೇಶಪಾಂಡೆ, ಯು.ಟಿ. ಖಾದರ್, ಪ್ರಿಯಾಂಕ ಖರ್ಗೆ, ಡಾ.ಯತೀಂದ್ರ ಸಿದ್ದರಾಮಯ್ಯ ಮತ್ತಿತರರು ಸರ್ಕಾರದ ಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.