25ನೇ ವಾರ್ಷಿಕೋತ್ಸವ ಆಚರಿಸಿಕೊಂಡ ಕುಡ್ಲದ ಇನ್ಫೋಸಿಸ್
ಮಂಗಳೂರು, ಸೆಪ್ಟೆಂಬರ್13: ಕುಡ್ಲದ ಇನ್ಫೋಸಿಸ್ ಗೆ ಈಗ 25ನೇ ವಾರ್ಷಿಕೋತ್ಸವ ಸಂಭ್ರಮ. ಇನ್ಫೋಸಿಸ್ ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಎರಡನೇ ಅತಿ ದೊಡ್ಡ ಸಂಸ್ಥೆ. 1,45,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಇನ್ಫೋಸಿಸ್ ಭಾರತದಲ್ಲಿ ಮಂಗಳೂರು ಸೇರಿದಂತೆ 9 ತಂತ್ರಾಂಶ ಅಭಿವೃದ್ಧಿ ಕೇಂದ್ರ ಮತ್ತು ಪ್ರಪಂಚದಾದ್ಯಂತ 29 ಕಚೇರಿಗಳನ್ನು ಹೊಂದಿದೆ.
1995ರಲ್ಲಿ ಇನ್ಫೋಸಿಸ್ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಿಂದ ಹೊರಗಡೆ ತನ್ನ ಸಾಫ್ಟ್ ವೇರ್ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಿತ್ತು. ಆ ಸಮಯದಲ್ಲಿ ಕಡಲ ನಗರಿ ಮಂಗಳೂರು, ಇನ್ಫೋಸಿಸ್ ನ ಗಮನ ಸೆಳೆಯಿತು.
25 ವರ್ಷಗಳ ಹಿಂದೆ (ಸೆಪ್ಟೆಂಬರ್ 10, 1995) ಒಂದು ಮಹಡಿ ಕಟ್ಟಡವನ್ನು ಬಾಡಿಗೆ ಪಡೆದು ಕೆಲವೇ ಸಿಬ್ಬಂದಿಗಳೊಂದಿಗೆ ಕಚೇರಿ ಆರಂಭಿಸಲಾಗಿತ್ತು. ಇಂದು ಈ ಸಂಸ್ಥೆ ಮುಡಿಪುನಲ್ಲಿ 360 ಎಕರೆ ಕ್ಯಾಂಪಸ್ ಹೊಂದಿದ್ದು, ವಿಶ್ವಾದ್ಯಂತ ಗ್ರಾಹಕರಿಗೆ ಸಾಫ್ಟ್‌ವೇರ್ ಯೋಜನೆಗಳ ಸೌಲಭ್ಯ ನೀಡುತ್ತಿದೆ. ಬರಡು ಭೂಮಿಯನ್ನು ಹಸಿರು ಆವರಣವನ್ನಾಗಿ ಪರಿವರ್ತಿಸಿರುವ ಇನ್ಫೋಸಿಸ್ ಮಂಗಳೂರು ಡೆವಲಪ್‌ಮೆಂಟ್ ಸೆಂಟರ್, 3 ಲಕ್ಷಕ್ಕೂ ಅಧಿಕ ಮರ, ಹತ್ತಾರು ಮಳೆ ನೀರು ಹೊಂಡ ಹೊಂದಿರುವ ಕ್ಯಾಂಪಸ್ ನ್ನಾಗಿ ಪರಿವರ್ತಿಸಿದೆ.
ಇನ್ಫೋಸಿಸ್ ಸಂಸ್ಥೆಯ ಇತರೆ ಕ್ಯಾಂಪಸ್ ನಂತೆ ಮಂಗಳೂರಿನ ಘಟಕದಲ್ಲೂ ಉದ್ಯೋಗಿಗಳಿಗೆ ಅತ್ಯಾಧುನಿಕ ಸೌಕರ್ಯಗಳಿವೆ. ಮಂಗಳೂರಿನ ಇನ್ಫೋಸಿಸ್ ಘಟಕ ಎರಡು ಫುಡ್‌ಕೋರ್ಟ್‌ಗಳು, ಸುಧಾರಿತ ಧ್ವನಿ ವ್ಯವಸ್ಥೆ ಹೊಂದಿರುವ ತೆರೆದ ಥಿಯೇಟರ್, ಅಂತಾರಾಷ್ಟ್ರೀಯ ಗುಣಮಟ್ಟದ ಫುಟ್‌ಬಾಲ್, ಕ್ರಿಕೆಟ್, ವಾಲಿಬಾಲ್ ಕೋರ್ಟ್‌ಗಳನ್ನು ಒಳಗೊಂಡಿದೆ. ಒಳಾಂಗಣ ಆಟಗಳಿಗೆ ಕ್ರೀಡಾ ಸಂಕೀರ್ಣ, ಒಂದು ಬ್ಯಾಡ್ಮಿಂಟನ್ ಕೋರ್ಟ್, ಬ್ಯಾಸ್ಕೆಟ್‌ಬಾಲ್ ಕೋರ್ಟ್, ಎರಡು ಈಜುಕೊಳ ಮತ್ತು ಇತರೆ ಸೌಲಭ್ಯಗಳನ್ನು ಸಹ ಒಳಗೊಂಡಿದೆ.








