ಬಿಹಾರ : ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ದಿನ ಕಳೆದಂತೆ ಹೆಚ್ಚಾಗುತ್ತಲೇ ಇವೆ. ಕೆಲವು ಬಹಿರಂಗವಾಗುತ್ತದೆ, ಕೆಲವೊಂದು ಬಹಿರಂಗವಾಗಲ್ಲ. ಆದ್ರೆ ದೇಶದ ಯಾವುದಾದರೂ ಒಂದು ಮೂಲೆಯಲ್ಲಿ ಕೆಳವರ್ಗದ ದಲಿತರ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ.
ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಬಿಹಾರದ ಗಯಾ ಜಿಲ್ಲೆಯ ಗ್ರಾಮವೊಂದರಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೊಬ್ಬರು ನೆಲಕ್ಕೆ ಎಂಜಲು ಉಗುಳಿ, ಅದನ್ನು ದಲಿತ ಯುವಕನ ನಾಲಗೆಯಿಂದ ನೆಕ್ಕಿಸಿ ವಿಕೃತಿ ಮೆರೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಯುವಕ ಹೇಳುವ ಪ್ರಕಾರ ಬಿಹಾರದಲ್ಲಿ ಪಂಚಾಯತ್ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಯುವಕ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷನ ಪ್ರಚಾರಕ್ಕೆ ತೆರಳಲು ನಿರಾಕರಿಸಿದ್ದನಂತೆ. ಇದರಿಂದ ಕೋಪಗೊಂಡ ಮಾಜಿ ಅಧ್ಯಕ್ಷ ಆತನನ್ನು ಮನೆಗೆ ಕರೆಸಿಕೊಂಡು ಥಳಿಸಿ ಎಂಜಲನ್ನು ನೆಕ್ಕಿಸಿದ್ದಾನೆ ಎಂದಿದ್ದಾನೆ.
ಆದ್ರೆ ಈ ಬಗ್ಗೆ ಪೊಲೀಸರು ಬೇರೆಯದ್ದೇ ಕಥೆಯನ್ನ ಹೇಳಿದ್ದಾರೆ. ಇದೊಂದು ಪ್ರೇಮ ಪ್ರಕರಣವಂತೆ. ಯುವಕನನ್ನ ಯುವಕನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವ ಬದಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರ ಮನೆಗೆ ಕರೆಕೊಂಡು ಹೋಗಿದ್ದರಂತೆ. ಈ ವೇಳೆ ಈ ರೀತಿಯ ಘಟನೆ ನಡೆದಿದೆಯಂತೆ.
ಅಲ್ಲದೆ ಪ್ರಕರಣ ಸಂಬಂಧ 6 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.