ಪ್ರಸಕ್ತ ವರ್ಷ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡ ತಯಾರಿ ಆರಂಭಿಸಿದ್ದು, ಇದರ ಬೆನ್ನಲ್ಲೇ ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರರಾಗಿ ಮಾಜಿ ಕ್ರಿಕೆಟಿಗ ಇಂಜಮಾಮ್-ಉಲ್-ಹಕ್ ನೇಮಕಗೊಂಡಿದ್ದಾರೆ.
ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರನಾಗಿ 2016ರಿಂದ 2019ರವರೆಗೆ ಕಾರ್ಯನಿರ್ವಹಿಸಿದ್ದ ಇಂಜಮಾಮ್, ರಾಷ್ಟ್ರೀಯ ತಂಡದಲ್ಲಿ ಉಂಟಾದ ಕ್ಲಿಷ್ಟಕರ ಪರಿಸ್ಥಿತಿಯ ಕಾರಣದಿಂದ ಅವಧಿಗೂ ಮುನ್ನವೇ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಆದರೆ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಕೆಲವೇ ತಿಂಗಳು ಬಾಕಿಯಿರುವ ಬೆನ್ನಲ್ಲೇ ತಂಡದ ಮುಖ್ಯ ಆಯ್ಕೆಗಾರರಾಗಿ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.
ಆಯ್ಕೆ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಇಂಜಮಾಮ್, ತಮ್ಮ ಮೊದಲ ಕರ್ತವ್ಯವಾಗಿ ಇದೇ ತಿಂಗಳ 22ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಪಾಕಿಸ್ತಾನ ತಂಡವನ್ನ ಆಯ್ಕೆ ಮಾಡುವುದಾಗಿದೆ. ಇದಾದ ನಂತರದಲ್ಲಿ ಏಷ್ಯಾಕಪ್ ಟೂರ್ನಿಗೆ ಹಾಗೂ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡವನ್ನ ಆಯ್ಕೆ ಮಾಡಬೇಕಾದ ಮಹತ್ವದ ಜವಾಬ್ದಾರಿ ಹೊತ್ತಿದ್ದಾರೆ. ಈ ಹಿಂದೆ 2019ರಲ್ಲಿ ಇಂಜಮಾಮ್, ಏಕದಿನ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ತಂಡವನ್ನು ಆಯ್ಕೆ ಮಾಡಿದ್ದರು.
ಇತ್ತೀಚೆಗಷ್ಟೇ ಝಾಕಾ ಅಶ್ರಫ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಹೊಸ ಬದಲಾವಣೆ ತರುವ ನಿಟ್ಟಿನಲ್ಲಿ ಈ ನಿರ್ಧಾರಕೈಗೊಳ್ಳಲಾಗಿತ್ತು. ಇದರ ಬೆನ್ನಲ್ಲೇ ಇಂಜಮಾಮ್ ಅವರನ್ನು ತಂಡದ ಆಯ್ಕೆ ಮಂಡಳಿ ಚೀಫ್ ಆಗಿ ಮರು ನೇಮಕ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಾಜಿ ಕ್ರಿಕೆಟಿಗ ಇಂಜಮಾಮ್ ಅವರೊಂದಿಗೆ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್ ಮತ್ತು ಮುಖ್ಯ ಕೋಚ್ ಗ್ರಾಂಟ್ ಬ್ರಾಡ್ಬರ್ನ್ ಕೂಡ ಆಯ್ಕೆ ಸಮಿತಿಯಲ್ಲಿದ್ದಾರೆ.








