ಬೆಂಗಳೂರು : ಲಾಕ್ ಡೌನ್ ಹಿನ್ನೆಲೆ ತಾನು ಬೆಳೆದ ಕಲ್ಲಂಗಡಿ ಹಣ್ಣುಗಳನ್ನು ಮಾರಲಾಗದೆ ಕಲಬುರ್ಗಿಯಲ್ಲಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಪ್ರಹಾರ ನಡೆಸಿದ್ದಾರೆ.
“ಕಲಬುರ್ಗಿಯ ರೈತನೊಬ್ಬ ತಾನು ಬೆಳೆದ ಕಲ್ಲಂಗಡಿ ಮಾರಾಟ ಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತಕಾರಿ ಬೆಳವಣಿಗೆ. ಈ ರೀತಿ ರೈತರು ಅವಸರದ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಿಎಂ ಯಡಿಯೂರಪ್ಪನವರು ರೈತರ ಕಷ್ಟ ನಿವಾರಣೆಗೆ ಸ್ಪಂದಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಟ್ವೀಟ್ ಬಳಿಕ ಸರಣಿ ಟ್ವೀಟ್ ಗಳ ಮೂಲಕ ರೈತರ ಸಮಸ್ಯೆಗಳನ್ನು ಎತ್ತಿಹಿಡಿದು ಸರ್ಕಾರಗಳ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
“ಒಂದೆಡೆ ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ಕಷ್ಟದಲ್ಲಿದ್ದಾರೆ. ಇನ್ನೊಂದೆಡೆ ಬಳಕೆದಾರರು ತರಕಾರಿಹಣ್ಣುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸಲು ಹಾಪ್ಕಾಮ್ ರೈತರಿಂದ ಖರೀದಿಸಿ ಬಳಕೆದಾರರಿಗೆ ಮಾರಾಟ ಮಾಡಲು ವ್ಯವಸ್ಥೆ ಮಾಡಬೇಕು”.
Farmers are finding it difficult to sell their produce due to lockdown & consumers are burdened with inflated prices.
I urge @CMofKarnataka to purchase farmers' produce directly through HOPCOMS & sell it to the people.
Also, open temporary HOPCOM shops in all urban areas.
5/5
— Siddaramaiah (@siddaramaiah) March 31, 2020
“ಅಗತ್ಯ ಪ್ರಮಾಣದಲ್ಲಿ ಪೂರೈಕೆ ಆಗುತ್ತಿಲ್ಲ ಎಂಬುದನ್ನೇ ನೆಪ ಮಾಡಿ ವ್ಯಾಪಾರಿಗಳು ತರಕಾರಿ-ಹಣ್ಣು ಮತ್ತು ಆಹಾರ ಸಾಮಗ್ರಿಗಳ ಬೆಲೆಯನ್ನು ಹೆಚ್ಚಿಸಿ ಬಳಕೆದಾರರ ಸುಲಿಗೆ ನಡೆಸುತ್ತಿರುವ ದೂರು ಕೇಳಿಬರುತ್ತಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಗಮನಹರಿಸಿ ಕ್ರಮಕೈಗೊಳ್ಳಬೇಕು” ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮುಂದುವರೆದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಸಿದ್ದರಾಮಯ್ಯ, “ಕೇಂದ್ರ ಸರ್ಕಾರ ರೈತರಿಂದ ಬೆಂಬಲ ಬೆಲೆಯಲ್ಲಿ ಖರೀದಿಸುವ ತೊಗರಿಯ ಪ್ರಮಾಣವನ್ನು 20 ಕ್ವಿಂಟಲ್ಗೆ ಹೆಚ್ಚಿಸಲು ನಿರಾಕರಿಸಿರುವುದು ಲಾಕ್ಡೌನ್ ನಿಂದ ಸಂಕಷ್ಟದಲ್ಲಿರುವ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೆಂಬಲ ಬೆಲೆಗೆ ಖರೀದಿಸುವ ತೊಗರಿಯನ್ನು 20 ಕ್ವಿಂಟಾಲ್ಗೆ ಹೆಚ್ಚಿಸಲು ಸಿಎಂ ಯಡಿಯೂರಪ್ಪ ಮಾಡಿರುವ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
“ಅಕ್ಕಿ ಪೂರೈಕೆಯನ್ನು ಸುಗಮಗೊಳಿಸಬೇಕು”
ಕೇಂದ್ರ ಸರ್ಕಾರ ತೊಗರಿ ಬೆಳೆಗೆ ಬೆಂಬಲ ಬೆಲೆ ನೀಡಲು ಆಸಕ್ತಿ ವಹಿಸದ ಕಾರಣ ರಾಜ್ಯ ಸರ್ಕಾರವೇ ಬೆಂಬಲ ಬೆಲೆಗೆ ತೊಗರಿ ಖರೀದಿಸಿ ಪಡಿತರ ಅಂಗಡಿಗಳಲ್ಲಿ ವಿತರಿಸುವ ವ್ಯವಸ್ಥೆ ಮಾಡಬೇಕು. ರಾಜ್ಯದಲ್ಲಿ ಅಕ್ಕಿ ಗಿರಣಿಗಳನ್ನು ಮುಚ್ಚಿರುವ ಕಾರಣ ಪೂರೈಕೆ ಇಲ್ಲದೆ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಏರತೊಡಗಿದೆ. ಇದರಿಂದಾಗಿ ಅಕ್ರಮ ದಾಸ್ತಾನಿನ ಆರೋಪ ಕೇಳಿಬರುತ್ತಿದೆ. ರಾಜ್ಯಸರ್ಕಾರ ಮಧ್ಯಪ್ರವೇಶಿಸಿ ಅಕ್ಕಿ ಗಿರಣಿಗಳನ್ನು ತೆರೆಸಿ ಅಕ್ಕಿ ಪೂರೈಕೆಯನ್ನು ಸುಗಮಗೊಳಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.