ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸರ್ಕಾರ ತನಿಖೆಗೆ ಆದೇಶಿಸಿದೆ. ಸದ್ಯ ಅಲ್ಲಿ ನಡೆದಿರುವ ಅವಾಂತರಗಳು ಈಗ ಬೆಳಕಿಗೆ ಬರುತ್ತಿವೆ.
ಅದೇ ಜೈಲಿನಲ್ಲಿ ಕೊಲೆ ಆರೋಪಿಗಳು ಬಿಂದಾಸ್ ಆಗಿ ಫೋಟೋ ಶೂಟ್ ಮಾಡಿಸಿಕೊಂಡಿರುವ ಘಟನೆ ಕೂಡ ಈಗ ಬೆಳಕಿಗೆ ಬಂದಿದೆ. ಪ್ರವಾಸ ಸ್ಥಳಗಳಿಗೆ ಹೋದಾಗ ಹೇಗೆ ಗ್ರೂಪ್ ಫೋಟೋ ಕ್ಲಿಕ್ ಮಾಡಲಾಗುತ್ತದೆಯೋ ಅದೇ ರೀತಿ ಶಾಟ್ಸ್, ಡಿಸೈನ್ ಡಿಸೈನ್ ಚಪ್ಪಲಿ ಹಾಕಿಕೊಂಡು ಆರೋಪಿಗಳು ಸೆಲ್ ನಲ್ಲಿ ಪೋಸ್ ನೀಡಿದ್ದಾರೆ.
ಸಿದ್ದಪುರ ಮಹೇಶ್ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ವಿಲ್ಸನ್ ಗಾರ್ಡನ್ ನಾಗ ಮತ್ತು ತಂಡದ ಸದಸ್ಯರ ಫೋಟೋ ಬೆಳಕಿಗೆ ಬರುತ್ತಿದ್ದಂತೆ ಪರಪ್ಪನ ಅಗ್ರಹಾರ ಜೈಲಿನ ಭ್ರಷ್ಟ ವ್ಯವಸ್ಥೆಯ ಅನಾವರಣವಾಗಿದೆ. ಕಳೆದ ವರ್ಷ ಆಗಸ್ಟ್ನಲ್ಲಿ ಸಿದ್ದಪುರ ಮಹೇಶ್ ನನ್ನು ನಾಗ ಹಾಗೂ ತಂಡ ಕೊಚ್ಚಿ ಕೊಲೆ ಮಾಡಿತ್ತು. ಪರಪ್ಪನ ಅಗ್ರಹಾರ ಜೈಲಿನಿಂದ ಹೊರಗಡೆ ಬಂದ ಕೇವಲ ಇನ್ನೂರು ಮೀಟರ್ ಅಂತರದಲ್ಲೇ ಸಿದ್ದಪುರ ಮಹೇಶನನ್ನು ಆರೋಪಿಗಳು ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ 20 ಜನ ಅರೆಸ್ಟ್ ಆಗಿದ್ದಾರೆ.
ಅರೆಸ್ಟ್ ಆಗಿ, ಜೈಲು ಪಾಲಾಗಿದ್ದರೂ ಆರೋಪಿಗಳಿಗೆ ಯಾವ ನೋವೂ ಆಗಿಲ್ಲ. ಅಷ್ಟೇ ಅಲ್ಲ, ತಮ್ಮ ವಿರೋಧಿ ಗುಂಪಿಗೆ ಭಯ ಹುಟ್ಟಿಸಲು ಜೈಲಿನ ಒಳಗಡೆ ನಾಗನ ತಂಡ ಫೋಟೋ ಶೂಟ್ ಮಾಡಿಸಿತ್ತು ಎಂಬ ಮಾತು ಕೇಳಿ ಬರುತ್ತಿದೆ. ಈ ವ್ಯವಸ್ಥೆ ಕಂಡು ಈಗ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.