ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಮುಂದುವರಿದಿದೆ. ಏತನ್ಮಧ್ಯೆ ಸರ್ಕಾರ ಮಹತ್ವದ ಬದಲಾವಣೆಗೆ ಮುಂದಾಗಿದ್ದು, ಇನ್ಮುಂದೆ ಬೆಂಗಳೂರಿನಲ್ಲಿ ಸೀಲ್ ಡೌನ್ ಮಾಡದಿರಲು ಬಿಬಿಎಂಪಿ ನಿರ್ಧರಿಸಿದೆ. ಈ ಬಗ್ಗೆ ಇಂದು ನಡೆದ ಬಿಬಿಎಂಪಿ ನಗರ ಇಂಜಿನೀಯರ್ ಗಳ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದು, ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೀಲ್ಡೌನ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನ ಮಾಡಲಾಗಿದೆ.
ಇನ್ಮುಂದೆ ಕೊರೊನಾ ಸೋಂಕಿತರ ಮನೆಯ ಮುಂದೆ ಬ್ಯಾರಿಕೇಡ್ ಹಾಕುವುದಿಲ್ಲ ಮತ್ತು ಏರಿಯಾವನ್ನ ಸೀಲ್ ಡೌನ್ ಮಾಡುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ಮನೆಯಲ್ಲಿ ಒಬ್ಬ ಸದಸ್ಯನಿಗೆ ಕೊರೊನಾ ಪಾಸಿಟಿವ್ ಬಂದಿದ್ದರೆ ಇನ್ಮುಂದೆ ಸಂಪೂರ್ಣ ಮನೆಯನ್ನ ಸೀಲ್ ಡೌನ್ ಮಾಡುವುದಿಲ್ಲ. ಬದಲಾಗಿ ಮನೆ ಬಾಗಿಲಿಗೆ ಮಾತ್ರ ಎಚ್ಚರಿಕೆಯ ಪೋಸ್ಟರ್ ಅಂಟಿಸಲಾಗುತ್ತೆ. ಇನ್ನು 100 ಮೀಟರ್ ಅಂತರದೊಳಗೆ 3ಕಿಂತ ಹೆಚ್ಚು ಕೇಸ್ಗಳಿದ್ದರೆ ಮಾತ್ರ ಅಂತಹ ರಸ್ತೆಗಳನ್ನ ಸೀಲ್ಡೌನ್ ಮಾಡಲಾಗುವುದು ಬಿಬಿಎಂಪಿ ಆಯುಕ್ತರು ಮಾಹಿತಿ ನೀಡಿದ್ದಾರೆ.