ರೈಲು ಅಪಘಾತ ತಡೆಯಲು ವಿನೂತನ ತಂತ್ರಜ್ಞಾನ – Saaksha Tv
ಹುಬ್ಬಳ್ಳಿ: ರೈಲು ಅಪಘಾತ ತಡೆಯತಲು ವಿನೂತನ ಕವಚ ತಂತ್ರಜ್ಞಾನವನ್ನು ಭಾರತೀಯ ರೈಲ್ವೆ ಅಬಿವೃದ್ಧಿಪಡಿಸಿದೆ.
ರೈಲು ಹಳಿಗಳ ಮೇಲೆ ಇದನ್ನು ಅಳವಡಿಸಲಾಗುತ್ತಿದ್ದು, ದೇಶೀಯವಾಗಿ ಕವಚ ತಂತ್ರಜ್ಞಾನವನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ಮುಂಬರುವ ದಿನಗಳಲ್ಲಿ ನೈಋತ್ಯ ವಲಯದ ವ್ಯಾಪ್ತಿಯಲ್ಲಿಯೂ ಈ ತಂತ್ರಜ್ಞಾನ ಅಳವಡಿಸುವುದಕ್ಕಾಗಿ ರೈಲು ಮಾರ್ಗಗಳನ್ನು ಗುರುತಿಸಲಾಗಿದೆ. ರೈಲು ಹಳಿಗಳ ಪಕ್ಕದಲ್ಲಿ ಅಳವಡಿಸುವ ಈ ಕವಚ ತಂತ್ರಜ್ಞಾನದಿಂದ ರೈಲುಗಳ ಮಧ್ಯೆ ಅಪಘಾತ ಸಂಭವಿಸುವುದು ತಪ್ಪಲಿದೆ.
ಮೊದಲ ಹಂತದಲ್ಲಿ ಹೆಚ್ಚು ರೈಲುಗಳ ದಟ್ಟಣೆ ಇರುವ ಮಾರ್ಗದಲ್ಲಿ ಈ ತಂತ್ರಜ್ಞಾನ ಅಳವಡಿಕೆಯಾಗಲಿದ್ದು, ನಂತರ ಹಂತ ಹಂತವಾಗಿ ಎಲ್ಲ ಮಾರ್ಗಗಳಲ್ಲಿ ಅಳವಡಿಕೆಯಾಗಲಿದೆ. ಅಲ್ಲದೇ ಇತ್ತೀಚಿಗೆ ಸಿಕಂದರಾಬಾದ್ ಬಳಿಯ ಗುಲ್ಲಗೂಡ – ಚಿತಗಿಡ್ಡ ನಿಲ್ದಾಣಗಳ ಮಧ್ಯೆ ಪರೀಕ್ಷಾರ್ಥವಾಗಿ ರೈಲು ಸಂಚರಿಸಿತ್ತು. ಆ ವೇಳೆ, ರೈಲಿನಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರಯಾಣಿಸುವ ಮೂಲಕ ಈ ತಂತ್ರಜ್ಞಾನದ ಪ್ರಾತ್ಯಕ್ಷಿಕ ಪರಿಶೀಲನೆ ನಡೆಸಿದ್ದರು.
ಪರೀಕ್ಷಾರ್ಥವಾಗಿ ಸಂಚರಿಸುತ್ತಿದ್ದ ರೈಲು ಪ್ರತಿ ಗಂಟೆಗೆ 160 ಕಿಮೀ ವೇಗದಲ್ಲಿ ಚಲಿಸುತ್ತಿತ್ತು. ಆ ರೈಲು ಸಂಚರಿಸುತ್ತಿದ್ದ ಹಳಿ ಮೇಲೆಯೇ ಎದುರಿನಿಂದ ಮತ್ತೊಂದು ರೈಲಿನ ಇಂಜಿನ್ ಬರುತ್ತಿತ್ತು. ರೈಲಿನ ಇಂಜಿನ್ ಇನ್ನೂ ಸಾಕಷ್ಟು ದೂರ ಇರುವಾಗಲೇ ರೈಲ್ವೆ ಸಚಿವರು ಇದ್ದ ರೈಲಿನ ವೇಗ ಏಕಾಏಕಿ ಕಡಿಮೆಯಾಯಿತು. ಎದುರಿನಿಂದ ಬರುತ್ತಿದ್ದ ರೈಲ್ವೆ ಇಂಜಿನ್ 386 ಮೀಟರ್ ದೂರ ಇರುತ್ತಿದ್ದಂತೆಯೇ ರೈಲ್ವೆ ಸಚಿವರು ಇದ್ದ ರೈಲು ತನ್ನಿಂದ ತಾನೇ ನಿಲುಗಡೆಗೊಂಡಿದ್ದು, ರೈಲ್ವೆ ಅಪಘಾತಕ್ಕೆ ಬ್ರೇಕ್ ಹಾಕಲು ಈ ನಿರ್ಧಾರ ಸೂಕ್ತವಾಗಿದೆ.








