ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆ ಐಎನ್ಎಸ್ ಖಂಡೇರಿ ತೀಕ್ಷ್ಣ ಕಾರ್ಯವೈಖರಿಗೆ ಹೆಸರುವಾಸಿ..!
ಭಾರತದ ಜಲಾಂತರ್ಗಾಮಿ ನೌಕೆಗಳು ತಮ್ಮ ತೀಕ್ಷ್ಣ ಕಾರ್ಯವೈಖರಿಗೆ ಹೆಸರುವಾಸಿ. ಅದರಲ್ಲೂ ಸಾಂಪ್ರದಾಯಿಕ ಜಲಾಂತರ್ಗಾಮಿಗಳನ್ನು ನಿರ್ಮಿಸುವ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಒಂದು. ಗುಪ್ತವಾಗಿ ಕಾರ್ಯನಿರ್ವಹಿಸುವ ಮೂಲಕ ರಹಸ್ಯವಾಗಿ ಮಾಹಿತಿಯನ್ನು ಕಲೆಹಾಕಲು ಹೇಳಿಮಾಡಿಸಿದ ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆ ಐಎನ್ಎಸ್ ಖಂಡೇರಿ. ಜಲಾಂತರ್ಗಾಮಿ ನೌಕೆಗಳನ್ನು ದೇಶೀಯವಾಗಿ ಭಾರತದ ಮಹತ್ವಾಕಾಂಕ್ಷಿ ಯೋಜನೆಯ ಮಹತ್ವದ ಹೆಜ್ಜೆಯೇ ಈ ಜಲಾಂತರ್ಗಾಮಿ ನೌಕೆಯ ನಿರ್ಮಾಣ. ಛತ್ರಪತಿ ಶಿವಾಜಿ ನಿಯಂತ್ರಣದಲ್ಲಿದ್ದ ಖಂಡೇರಿ ಅಥವಾ ಖಾಂಡೇರಿ ಕೋಟೆಯ ಹೆಸರನ್ನು ಈ ಜಲಾಂತರ್ಗಾಮಿ ನೌಕೆಗೆ ಇಡಲಾಗಿದೆ. ಸಮುದ್ರದ ನಡುವೆ ಇದ್ದ ಈ ಕೋಟೆಯ ಕಾರಣದಿಂದಾಗಿ ಶಿವಾಜಿಯ ನೌಕಾದಳ 17ನೇ ಶತಮಾನದಲ್ಲಿ ಪಾರಮ್ಯ ಸಾಧಿಸಿತ್ತು ಎನ್ನಲಾಗಿದೆ.
ದೇಶದ ಎರಡನೇ ಸ್ಕಾರ್ಪಿಯನ್ ಶ್ರೇಣಿಯ ಅತ್ಯಾಧುನಿಕ ‘ಐಎನ್‌ಎಸ್ ಖಂಡೇರಿ’ ಜಲಾಂತರ್ಗಾಮಿ ನೌಕಾಪಡೆಗೆ ಅಧಿಕೃತವಾಗಿ ೨೦೧೯ರಲ್ಲಿ ನೌಕಾಸೇನೆಗೆ ಸೇರ್ಪಡೆಯಾಯಿತು. ದೇಶದ ಅತ್ಯುತ್ತಮ ಮತ್ತು ಅತ್ಯಾಧುನಿಕ ಜಲಾಂತರ್ಗಾಮಿ ನೌಕೆಗಳಲ್ಲಿ ಒಂದಾಗಿದೆ. 350 ಮೀಟರ್ ಆಳದಲ್ಲಿ 50 ದಿನಗಳ ಕಾಲ ಗಸ್ತು ತಿರುಗುವ ಸಾಮರ್ಥ್ಯ ಹೊಂದಿರುವ ಈ ಅತ್ಯಾಧುನಿಕ ನೌಕೆಯು ತೇಲುವಾಗ 1,615 ಟನ್ ಮತ್ತು ಮುಳುಗಿದಾಗ 1,775 ಟನ್ ಸ್ಥಳಾಂತರಿಸುತ್ತದೆ.
67.5 ಮೀಟರ್ ಉದ್ದದ ಐಎನ್‌ಎಸ್ ಖಂಡೇರಿ ನಾಲ್ಕು ಎಂಟಿಯು ಡೀಸೆಲ್ ಎಂಜಿನ್ ಮತ್ತು 12ವೋಲ್ಟ್ 360 ಬ್ಯಾಟರಿ ಸೆಲ್‌ಗಳಿಂದ ನಿಯಂತ್ರಿಸಲ್ಪಡುತ್ತದೆ. ದಾಳಿಯ ಜಲಾಂತರ್ಗಾಮಿ ನೌಕೆ 37 ಕಿಮೀ ಪ್ರತಿ ಗಂಟೆಗೆ ಸಾಗರದಡಿಯಲ್ಲಿ ಚಲಿಸಬಹುದಾಗಿದ್ದು, ಮೇಲ್ಮೈಯಲ್ಲಿ ಅದರ ವೇಗವು 20 ಕಿಮೀ ಪ್ರತಿ ಗಂಟೆಗೆ ಇರಲಿದೆ. ಐಎನ್ಎಸ್ ಖಂಡೇರಿ ಶಬ್ದ ರಹಿತ ಜಲಾಂತರ್ಗಾಮಿ ನೌಕೆಯಾಗಿದೆ. ಹೀಗಾಗಿ ಖಂಡೇರಿ ಅಷ್ಟು ಸುಲಭಕ್ಕೆ ಶತ್ರುಪಾಳದ ನೌಕೆಗಳ ಗುರಿಯಾಗುವುದಿಲ್ಲ. ಮುಂಬೈನ ಮಡಗಾವ್ ಡಾಕ್ ಯಾರ್ಡ್ ನಲ್ಲಿ ಈ ಜಲಾಂತರ್ಗಾಮಿಯನ್ನು ನಿರ್ಮಿಸಲಾಗಿದೆ.
ಭಾರತೀಯ ನೌಕಾಸೇನೆಯ ಈ ವೀರನಿಗೆ ನಿಮ್ಮದೊಂದು ಮೆಚ್ವುಗೆಯಿರಲಿ.