ಜಲಾಂತರ್ಗಾಮಿ ನಿಗ್ರಹ ಐಎನ್ಎಸ್ ಸಹ್ಯಾದ್ರಿ..!!
ಭಾರತೀಯ ನೌಕಾಸೇನೆಯ ವಿಶಿಷ್ಟ ನೌಕೆ ಐಎನ್ಎಸ್ ಸಹ್ಯಾದ್ರಿ. ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನಿಗ್ರಹ ಯುದ್ದ ಸಾಮರ್ಥ್ಯ ಹೊಂದಿರುವ ರಹಸ್ಯ ಯುದ್ಧ ನೌಕೆ ಎಂಬ ಖ್ಯಾತಿಗೆ ಸಹ್ಯಾದ್ರಿ ನೌಕೆ ಒಳಗಾಗಿದೆ.
ರಹಸ್ಯ ಯುದ್ಧನೌಕೆಯ ಸರಣಿಯಲ್ಲಿ ಸಹ್ಯಾದ್ರಿ ಮೂರನೇ ಯುದ್ಧ ನೌಕೆಯಾಗಿದೆ. ೪೯೦೦ ಟನ್ ತೂಕದ ಸಹ್ಯಾದ್ರಿ ಯುದ್ಧನೌಕೆ ಎರಡು ಹೆಲಿಕಾಪ್ಟರ್ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊತ್ತು ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ.
ಶಿವಾಲಿಕ್ ಶ್ರೇಣಿಯ ಸಹ್ಯಾದ್ರಿ ಯುದ್ಧನೌಕೆಯ ನಿರ್ಮಾಣ ಕಾರ್ಯ 2003ರಲ್ಲಿ ಶುರುವಾಯಿತು. 2005ರಲ್ಲಿ ಇದರ ಪರೀಕ್ಷಾ ಕಾರ್ಯ ಪೂರ್ಣಗೊಂಡಿತು. ಈ ವರ್ಷದ ಮೊದಲ ಭಾಗದಲ್ಲಿ ಸಹ್ಯಾದ್ರಿ ನೌಕೆಯ ಪರೀಕ್ಷೆಯನ್ನು ಅರಬ್ಬಿ ಸಮುದ್ರದಲ್ಲಿ ನಡೆಸಲಾಯಿತು. ಯೋಜನೆ-17ರ ಸಮರನೌಕೆಗಳ ಸಾಲಿನಲ್ಲಿ ಸಹ್ಯಾದ್ರಿ ಮೂರನೆಯ ಹಾಗೂ ಕೊನೆಯ ಯುದ್ಧನೌಕೆಯಾಗಿದೆ.
ಐಎನ್ಎಸ್ ಸಹ್ಯಾದ್ರಿಯೂ ಸೇರಿದಂತೆ ಶಿವಾಲಿಕ್ ಮಾದರಿಯ ಯುದ್ಧನೌಕೆಗಳು 142 ಮೀ. ಉದ್ದ ಹಾಗೂ 17 ಮೀಟರ್ ಅಗಲ ಹೊಂದಿವೆ. ಅತ್ಯಾಧುನಿಕ ಡೀಸೆಲ್ ಮತ್ತು ಅನಿಲ ಎಂಜಿನ್ಗಳನ್ನು ಒಳಗೊಂಡಿವೆ. ರಾಡಾರ್ ವ್ಯವಸ್ಥೆಯನ್ನೂ ಹೊಂದಿರುವ ಇವುಗಳು ಶತ್ರುವಿನ ಜಾಡನ್ನು ಸುಲಭವಾಗಿ ಪತ್ತೆ ಹಚ್ಚುವ ಸಾಮರ್ಥ್ಯ ಪಡೆದಿವೆ. ಈ ನೌಕೆಗಳ ಮೇಲಿನಿಂದ ಕೆಲವು ಮಾದರಿಯ ಟಾರ್ಪೆಡೊಗಳು, ರಾಕೆಟ್ಗಳು, ಕ್ಷಿಪಣಿಗಳನ್ನು ಉಡಾವಣೆ ಮಾಡಬಹುದು.
ಇವುಗಳು ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿ, ಧ್ರುವ, ಸೀ ಕಿಂಗ್ ಅಥವಾ ಕಮೋವ್ ಮಾದರಿಯ ಹೆಲಿಕಾಪ್ಟರ್ಗಳನ್ನೂ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ.
ಸಹ್ಯಾದ್ರಿ ಯುದ್ಧನೌಕೆ ೨೦೧೨ ರಲ್ಲಿ ನೌಕಾಸೇನೆಗೆ ಸೇರ್ಪಡೆಯಾಯಿತು. ಅಂದಿನಿಂದ ಇಂದಿನವರೆಗೂ ಕರಾವಳಿ ರಕ್ಷಣೆಗೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ.