ರಾಜ್ಯದ ಕರಾವಳಿ ಭಾಗದಲ್ಲಿ ಉಂಟಾಗಿರುವ ಭಾರೀ ಮಳೆ ಮತ್ತು ಅದರ ಪರಿಣಾಮವಾಗಿ ಮನೆಗಳು, ರಸ್ತೆ, ಸೇತುವೆಗಳ ಕುಸಿತದ ಹಿನ್ನೆಲೆ, ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ, ರಾಜ್ಯದ ಉದ್ದಗಲಕ್ಕೂ ಮಳೆ ಹಿನ್ನಲೆಯಲ್ಲಿ ಸಾವಿರಾರು ಜನರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಮನೆ ಕಳೆದು ಕೊಂಡಿದ್ದಾರೆ, ದಿನಸಿ ಇಲ್ಲದೆ ಪರದಾಡುತ್ತಿದ್ದಾರೆ. ರಸ್ತೆ, ಸೇತುವೆಗಳು ಕುಸಿದು ಸಂಪರ್ಕ ಕಳೆದು ಹೋಗಿದೆ. ಜನರು ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಬಂದಿದೆ. ಆದರೆ ಈ ಸಂದರ್ಭದಲ್ಲಿ ಕೂಡ ಸರ್ಕಾರ ಯಾವುದೇ ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ, ಎಂದು ಕಿಡಿಕಾರಿದ್ದಾರೆ.
ಸರ್ಕಾರ ಜನರ ಕಣ್ಣೀರು ಒರೆಸಬೇಕಾದ ಸಮಯದಲ್ಲಿ ಅವರ ಕಣ್ಣಲ್ಲಿ ‘ರಕ್ತಕಣ್ಣೀರು’ ಸುರಿಯುವಂತಹ ನಿಲುವು ತಾಳುತ್ತಿದೆ. ಇದು ಅತೀ ದುಃಖದ ವಿಷಯ. ನಮ್ಮ ಜನರು ಸಂಕಷ್ಟದಲ್ಲಿರುವಾಗ ಸರ್ಕಾರದ ನಿರ್ಲಕ್ಷ್ಯ ನೋವು ತಂದಿದೆ, ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಅವರು, ನಿಮ್ಮಿಂದ ನಿರೀಕ್ಷೆಯಿರುವುದು ಮಾತುಗಳಲ್ಲ. ತಕ್ಷಣವೇ ಕರಾವಳಿಗೆ ಭೇಟಿ ನೀಡಿ, ಜನರ ನಡುವೆ ಹೋದರೆ ಅವರಿಗೆ ಧೈರ್ಯ ಬರುತ್ತದೆ. ಅವರ ಸ್ಥಿತಿಯನ್ನು ನೋಡಿ, ತಕ್ಷಣ ಪರಿಹಾರ ಕ್ರಮ ಕೈಗೊಳ್ಳಿ. ಪ್ರಕೃತಿಯ ಈ ಆರ್ಭಟಕ್ಕೆ ತಾಂತ್ರಿಕ ಹಾಗೂ ಮಾನವೀಯ ದೃಷ್ಟಿಕೋನದಿಂದ ಸ್ಪಂದನೆ ಅಗತ್ಯ, ಎಂದು ಹೇಳಿದರು.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಮಳೆಯ ಆರ್ಭಟ ಜೋರಾಗಿದ್ದು, ನದಿಗಳು ಉಕ್ಕಿ ಹರಿಯುತ್ತಿದೆ, ಪ್ರವಾಹ ಪೀಡಿತ ಹಳ್ಳಿಗಳಿಂದ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಈ ನಡುವೆ ಸರ್ಕಾರದ ನಿಷ್ಕ್ರಿಯತೆಗೆ ನಾಯಕರು ಕಿಡಿಕಾರುತ್ತಿದ್ದಾರೆ.








