ಅಮೆರಿಕದ ಶ್ವೇತ ಭವನದಲ್ಲಿ ಅಧ್ಯಕ್ಷ ಟ್ರಂಪ್ಗೆ ಭಾರತೀಯ ಪತ್ರಕರ್ತನೊಬ್ಬ ಪ್ರಶ್ನೆ ಕೇಳುತ್ತಿದ್ದಾಗ ನ್ಯೂಯಾರ್ಕ್ನ ಪತ್ರಕರ್ತೆಯೊಬ್ಬಳು ಅವಮಾನೀಯವಾಗಿ ನಡೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೆಬ್ರವರಿ 26 ರಂದು ಅಮೆರಿಕಾದ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾ ವೈರಸ್ ಸ್ಥಿತಿಗತಿಯ ಬಗ್ಗೆ ಸುದ್ದಿಗೋಷ್ಟಿ ನಡೆಸುತ್ತಿದ್ದರು. ಈ ವೇಳೆ ಶ್ವೇತಭವನದ ಭಾರತೀಯ ಪತ್ರಕರ್ತರೊಬ್ಬರು ಇಂಡೋ-ಯುಎಸ್ ಸಂಬಂಧದ ಬಗ್ಗೆ ಅಧ್ಯಕ್ಷರನ್ನು ಪ್ರಶ್ನೆಯನ್ನು ಕೇಳುತ್ತಿದ್ದ ಸಂದರ್ಭದಲ್ಲಿ ಅಲ್ಲೇ ಹಿಂಬದಿ ಕುಳಿತಿದ್ದ ಎಬೊನಿ ಬೌಡೆನ್ ಎಂಬ ನ್ಯೂಯಾರ್ಕ್ ಮೂಲದ ಪತ್ರಕರ್ತೆಯೊಬ್ಬಳು ಯಾರು ಎಂದು ಈತ ಪಕ್ಕದಲ್ಲಿ ಕುಳಿತ್ತಿದ್ದ ಪತ್ರಕರ್ತರನ್ನು ಕೇಳಿ, ಹಾಗೇ ಭಾರತೀಯ ಪರ್ತಕರ್ತನ ದಿಟ್ಟಿಸಿ ಅವಮಾನೀಯವಾಗಿ ನಕ್ಕಿದ್ದಾಳೆ.
ಹೀಗೆ ವ್ಯಂಗ್ಯವಾಗಿ ನಗುತ್ತಿರುವ ವಿಡಿಯೋ ತುಣುಕೊಂದನ್ನು ಡಮೋನ್ ಇಮಾನಿ ಎಂಬಾತ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾನೆ. ಪೋಸ್ಟ್ ಮಾಡುತ್ತಿದ್ದಂತೆ ಸಕತ್ ವೈರಲ್ ಆಗಿದೆ. ವಿಡಿಯೋ ಕಂಡ ನೆಟ್ಟಿಗರು ಆಕೆ ಜನಾಂಗೀಯ ನಿಂದನೆ ಮಾಡುತ್ತಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಮೆಂಟ್ ಮಾಡೋ ಮೂಲಕ ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.








