ಜೂನ್ 10ರಂದು ನಡೆಯಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಮಹತ್ವದ ಸಭೆ
2020ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಜೂನ್ 10ರಂದು ಮಹತ್ವದ ಸಭೆ ನಡೆಸಲಿದೆ. ಈ ಸಭೆಯಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ, ಐಸಿಸಿ ಮುಂದಿನ ಅಧ್ಯಕ್ಷರ ಆಯ್ಕೆ ಸೇರಿದಂತೆ ಕೆಲವೊಂದು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.
ಒಂದು ವೇಳೆ ಐಸಿಸಿಯು ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಮುಂದೂಡುವ ನಿರ್ಧಾರ ತೆಗೆದುಕೊಂಡ್ರೆ, ಬಿಸಿಸಿಐ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ನಡುವೆ ಸಣ್ಣ ಮಟ್ಟಿನ ಸ್ಪರ್ಧೆ ನಡೆಯಲಿದೆ. 2021ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಲಿದೆ. ಆದ್ರೆ 2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ವಿಶ್ವಕಪ್ ಟೂರ್ನಿಯನ್ನು ಯಾವಾಗ ನಡೆಸುವುದು ಎಂಬುದು ಐಸಿಸಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 2021ರಲ್ಲಿ ಭಾರತದ ಬದಲು ಆಸ್ಟ್ರೇಲಿಯಾಗೆ ಆತಿಥ್ಯ ವಹಿಸುವಂತೆ ಮಾಡಿ, 2022ರ ವಿಶ್ವಕಪ್ ಟಿ-ಟ್ವೆಂಟಿ ಟೂರ್ನಿಯನ್ನು ಭಾರತ ವಹಿಸುವಂತೆ ಬಿಸಿಸಿಐ ಮೇಲೆ ಒತ್ತಡ ಹೇರುವ ಸಾಧ್ಯತೆಯೂ ಇದೆ. ಆದ್ರೆ ಬಿಸಿಸಿಐ, ಐಸಿಸಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದ ಒತ್ತಡಕ್ಕೆ ಮಣಿಯುತ್ತಾ ಅನ್ನೋದನ್ನು ಕಾದು ನೋಡಬೇಕು.
ನೋಡೋಣ,,, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ನಿರ್ಧಾರ ಏನು ಎಂಬುದು. ಮೊದಲು 2020ರ ಟಿ-ಟ್ವೆಂಟಿ ಟೂರ್ನಿಯ ಭವಿಷ್ಯ ನಿರ್ಧಾರವಾಗಬೇಕು. ಐಸಿಸಿ ಸಭೆಯಲ್ಲಿ ಏನು ನಿರ್ಧಾರ ತಗೊಳ್ಳುತ್ತಾರೋ ಅನ್ನೋದು ಮುಖ್ಯವಾಗಿರುತ್ತೆ ಎಂದು ಬಿಸಿಸಿಐ ಕೋಶಾಧಿಕಾರಿ ಅರುಣ್ ಧೂಮಲ್ ತಿಳಿಸಿದ್ದಾರೆ.
ಇನ್ನು ಐಸಿಸಿ ಮುಂದಿನ ಅಧ್ಯಕ್ಷರ ಚುನಾವಣೆಯ ಬಗ್ಗೆಯೂ ಈ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಭಾರತದ ಶಶಾಂಕ್ ಮನೋಹರ್ ಅವರ ಅಧಿಕಾರ ಅವಧಿ ಮುಗಿದಿದೆ. ಹೀಗಾಗಿ ಮುಂದಿನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳನ್ನು ಮಾಡಬೇಕಾಗುತ್ತದೆ. ಈಗಾಗಲೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಕಾಲಿನ್ ಗ್ರೇವ್ಸ್ ಅವರು ಅವಿರೋಧವಾಗಿ ಆಯ್ಕೆಯಾಗುತ್ತಾರೆ ಅಂತ ಹೇಳಲಾಗುತ್ತಿತ್ತು. ಆದ್ರೆ ಈಗ ಅಧ್ಕಕ್ಷ ಹುದ್ದೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಪಾಕ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಎಹ್ಸಾನ್ ಮಣಿ ಅವರ ಹೆಸರುಗಳು ಕೇಳಿಬರುತ್ತಿವೆ.
ಆದ್ರೆ ಬಿಸಿಸಿಐ ನಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಈ ವಿಚಾರದಲ್ಲಿ ಯಾವುದೇ ಆತುರ ಬೇಡ. ಮೊದಲು ಚುನಾವಣೆ ಪ್ರಕ್ರಿಯೆಗಳು ಘೋಷಣೆ ಆಗಲಿ. ಆನಂತರ ನಿರ್ಧಾರ ಮಾಡಿದ್ರಾಯ್ತು ಅಂತ ಬಿಸಿಸಿಐ ಕೋಶಾಧಿಕಾರಿ ಅರುಣ್ ಧುಮಾಲ್ ಹೇಳಿದ್ದಾರೆ.








