ಐಪಿಎಲ್ 2020- ಸಿಎಸ್‍ಕೆ ತಂಡಕ್ಕೆ ಮತ್ತೊಂದು ಆಘಾತ…? ತಂಡವನ್ನು ಇನ್ನೂ ಸೇರಿಕೊಳ್ಳದ ಹರ್ಭಜನ್ ಸಿಂಗ್…!
2020ರ ಯುಎಇ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತದ ಮೇಲೆ ಆಘಾತ ಕಾಡುತ್ತಿದೆ. ಯುಎಇಗೆ ಆಗಮಿಸುತ್ತಿದ್ದಂತೆ ಸಿಎಸ್‍ಕೆ ತಂಡಕ್ಕೆ ಕೋವಿಡ್ ಸಂಕಷ್ಟ ಎದುರಾಗಿತ್ತು. ಅದರ ಬೆನ್ನಲ್ಲೇ ಸುರೇಶ್ ರೈನಾ ಸಡನ್ ಆಗಿ ತಂಡದಿಂದ ಹೊರನಡೆದಿದ್ದರು. ಇದೀಗ ಹರ್ಭಜನ್ ಸಿಂಗ್ ಸರದಿ.
ಹೌದು, ಹರ್ಭಜನ್ ಸಿಂಗ್ ಇನ್ನೂ ಕೂಡ ಸಿಎಸ್‍ಕೆ ತಂಡವನ್ನು ಸೇರಿಕೊಂಡಿಲ್ಲ. ವೈಯಕ್ತಿಕ ಕಾರಣ ನೀಡಿ ಆಗಸ್ಟ್ 21ರಂದು ಹರ್ಭಜನ್ ಸಿಂಗ್ ಸಿಎಸ್‍ಕೆ ತಂಡದೊಂದಿಗೆ ಯುಎಇಗೆ ಪ್ರಯಾಣ ಬೆಳೆಸಲಿಲ್ಲ. ಚೆನ್ನೈ ತರಬೇತಿ ಶಿಬಿರದಲ್ಲೂ ಭಾಗಿಯಾಗಿರಲಿಲ್ಲ. ಕೋವಿಡ್ ಪರೀಕ್ಷೆಯ ನಂತರ ಸಿಎಸ್‍ಕೆ ತಂಡ ಇಂದಿನಿಂದ ಅಭ್ಯಾಸ ಶುರು ಮಾಡುವ ಸಾಧ್ಯತೆ ಇದೆ.
ಈ ನಡುವೆ, ಹರ್ಭಜನ್ ಸಿಂಗ್ ಸಿಎಸ್‍ಕೆ ತಂಡವನ್ನು ಸೇರಿಕೊಳ್ಳುವುದರ ಬಗ್ಗೆ ಯಾವುದೇ ಸೂಚನೆಯನ್ನು ನೀಡಿಲ್ಲ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಭಾಗಿಯಾಗುವುದರ ಬಗ್ಗೆಯೂ ಹರ್ಭಜನ್ ಸಿಂಗ್ ಮಾಹಿತಿಯನ್ನು ಸಿಎಸ್‍ಕೆ ತಂಡಕ್ಕೆ ನೀಡಿಲ್ಲ. ಸಿಎಸ್‍ಕೆ ತಂಡದ ಮೂಲಗಳ ಪ್ರಕಾರ ಇಂದು ಸಂಜೆ ಅಥವಾ ನಾಳೆ ಹರ್ಭಜನ್ ಸಿಂಗ್ ಬಗ್ಗೆ ಸ್ಪಷ್ಟವಾದ ಚಿತ್ರಣ ಸಿಗಲಿದೆ.
ಒಟ್ಟಿನಲ್ಲಿ ಸಿಎಸ್‍ಕೆ ತಂಡದಲ್ಲಿ ಯಾವುದು ಕೂಡ ಸರಿ ಇಲ್ಲ ಎಂಬ ಅನುಮಾನ ಕೂಡ ಕಾಡುತ್ತಿದೆ. ಒಗ್ಗಟ್ಟಿನ ತಂಡವಾಗಿದ್ದ ಸಿಎಸ್‍ಕೆ ತಂಡದಲ್ಲಿ ಇದೇ ಮೊದಲ ಬಾರಿ ಒಡಕಿನ ಮನೆಯಂತಾಗಿದೆ ಎಂಬ ಸಂದೇಹ ಕೂಡ ಕಾಡುತ್ತಿದೆ. ಹಿರಿಯ ಆಟಗಾರರು ಸಡನ್ ಆಗಿ ತಮ್ಮ ನಿರ್ಧಾರವನ್ನು ಬದಲಾವಣೆ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ಟೂರ್ನಿ ನಡೆಯಲಿದೆ. ಇಂದು ಬಿಸಿಸಿಐ ಐಪಿಎಲ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಈ ಹಿಂದೆ ನಿಗದಿಯಾದಂತೆ ಯುಎಇ ಐಪಿಎಲ್ ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಕಾದಾಟ ನಡೆಸಲಿವೆ.








