ಐಪಿಎಲ್ 2020- ಮಂಕಾಗುತ್ತಿರುವ ಈ ಐದು ಬ್ಯಾಟ್ಸ್ ಮೆನ್ ಗಳು.. ಫ್ರಾಂಚೈಸಿಗಳಿಗೆ ದೊಡ್ಡ ತಲೆನೋವು..!
2020ರ ಐಪಿಎಲ್ ನಲ್ಲಿ ಯುವ ಆಟಗಾರರದ್ದೇ ದರ್ಬಾರು. ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ್ದ ಹುಡುಗರು ಐಪಿಎಲ್ ನಲ್ಲಿ ಚಿಂದಿ ಉಡಾಯಿಸುತ್ತಿದ್ದಾರೆ.
ಸುಮಾರು 10ರಿಂದ 15 ಮಂದಿ ಯುವ ಆಟಗಾರರು ಈ ಬಾರಿಯ ಐಪಿಎಲ್ ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಈ ಹುಡುಗರ ಬ್ಯಾಟಿಂಗ್ ವೈಖರಿಯನ್ನು ನೋಡಿದಾಗ ಕಣ್ಣಂಚಿನಲ್ಲಿ ಭವಿಷ್ಯದ ಟೀಮ್ ಇಂಡಿಯಾ ಎದ್ದು ಕಾಣುತ್ತಿದೆ.
ಹೌದು, ಯುವ ಆಟಗಾರರ ಅಬ್ಬರದ ಮುಂದೆ ಹಿರಿಯ ಹಾಗೂ ಅನುಭವಿ ಆಟಗಾರರ ಆಟ ಕಳೆಗುಂದುತ್ತಿದೆ. ಹಾಗಂತ ಎಲ್ಲರೂ ಅಲ್ಲ. ಟೀಮ್ ಇಂಡಿಯಾದ ಬಹುತೇಕ ಆಟಗಾರರು ಹಾಗೂ ಕೆಲವು ವಿದೇಶಿ ಆಟಗಾರರು ಐಪಿಎಲ್ ನಲ್ಲಿ ಗಮನಸೆಳೆಯುವಂತಹ ಪ್ರದರ್ಶನ ನೀಡುತ್ತಿದ್ದಾರೆ.
ಆದ್ರೆ ಇನ್ನು ಕೆಲವು ಹಿರಿಯ ಆಟಗಾರರು ತೀರಾ ನೀರಸ ಪ್ರದರ್ಶನ ನೀಡಿ ಟೀಕೆಗೂ ಗುರಿಯಾಗುತ್ತಿದ್ದಾರೆ. ಮುಖ್ಯವಾಗಿ ಈ ಬಾರಿಯ ಐಪಿಎಲ್ ನಲ್ಲಿ ವೈಫಲ್ಯ ಅನುಭವಿಸಿದ್ದ ಟಾಪ್ -5 ಬ್ಯಾಟ್ಸ್ ಮೆನ್ ಗಳು ಯಾರು ಅಂತ ಪ್ರಶ್ನೆ ಮಾಡಿದಾಗ ಉತ್ತರ ಈ ಕೆಳಗಿನಂತಿದೆ.
ದಿನೇಶ್ ಕಾರ್ತಿಕ್.
ದಿನೇಶ್ ಕಾರ್ತಿಕ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ. ನಾಯಕ ಹಾಗೂ ವಿಕೆಟ್ ಕೀಪರ್ ಆಗಿ ದಿನೇಶ್ ಕಾರ್ತಿಕ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದ್ರೆ ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಗಳಿಸಿದ್ದು ಕೇವಲ 37 ರನ್.
ರಾಬಿನ್ ಉತ್ತಪ್ಪ
ರಾಬಿನ್ ಉತ್ತಪ್ಪ.. ಹೊಡಿಬಡಿ ಆಟಗಾರ. ಕೆಕೆಆರ್ ತಂಡದ ಹಿರಿಯ ಆಟಗಾರನಾಗಿದ್ದ ರಾಬಿನ್ ಉತ್ತಪ್ಪ ಅವರನ್ನು ರಾಜಸ್ತಾನ ರಾಯಲ್ಸ್ ತಂಡ ಮೂರು ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಆದ್ರೆ ಈ ಬಾರಿಯ ಐಪಿಎಲ್ ನಲ್ಲಿ ಉತ್ತಪ್ಪ ನಿರಾಸೆ ಮೂಡಿಸಿದ್ದಾರೆ. ಸದ್ಯದ ಟೂರ್ನಿಯಲ್ಲಿ ರಾಬಿನ್ ಉತ್ತಪ್ಪ 33 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಅದೇ ರೀತಿ ಕೆಟ್ಟ ಫೀಲ್ಡಿಂಗ್ ಮೂಲಕವೂ ಟೀಕೆಗೆ ಗುರಿಯಾಗಿದ್ದಾರೆ.
ಮುರಳಿ ವಿಜಯ್
ಮುರಳಿ ವಿಜಯ್.. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ. 2010ರಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ಅಜೇಯ 127 ರನ್ ಕೂಡ ಸಿಡಿಸಿದ್ದರು. ಆಡಿರುವ ಮೂರು ಪಂದ್ಯಗಳಲ್ಲಿ ಮುರಳಿ ವಿಜಯ್ ಗಳಿಸಿದ್ದ ರನ್ ಕೇವಲ 32. ಹೀಗಾಗಿ ಸಿಎಸ್ ಕೆ ತಂಡದ 11ರ ಬಳಗದಿಂದಲೂ ಹೊರಗುಳಿದಿದ್ದಾರೆ.
ಸುನೀಲ್ ನರೇನ್
ಸುನೀಲ್ ನರೇನ್.. ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್ ರೌಂಡರ್. ಸ್ಪಿನ್ ಜಾದು ಮೂಲಕ ಗಮನ ಸೆಳೆದಿದ್ದ ಸುನೀಲ್ ನರೇನ್ ಕೆಕೆಆರ್ ತಂಡದ ಇನಿಂಗ್ಸ್ ಕೂಡ ಆರಂಭಿಸುತ್ತಿದ್ದರು. ಆದ್ರೆ ಸುನೀಲ್ ನರೇನ್ ಅವರು ಸಿಪಿಎಲ್ ನಲ್ಲಿ ಮಾಡಿರುವಂತಹ ಬ್ಯಾಟಿಂಗ್ ಅಬ್ಬರವನ್ನು ಐಪಿಎಲ್ ನಲ್ಲಿ ಮಾಡಲು ವಿಫಲರಾಗಿದ್ದಾರೆ. ಸದ್ಯ ನಾಲ್ಕು ಪಂದ್ಯಗಳನ್ನು ಆಡಿರುವ ನರೇನ್ ಅವರು 27 ರನ್ ಗಳಿಸಿದ್ದಾರೆ.
ಗ್ಲೇನ್ ಮ್ಯಾಕ್ಸ್ ವೆಲ್
ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಅವರು ಚುಟುಕು ಕ್ರಿಕೆಟ್‍ನ ಅದ್ಭುತ ಆಟಗಾರ. ಕಿಂಗ್ಸ್ ಇಲೆವೆನ್ ತಂಡ 10.75 ಕೋಟಿಗೆ ಖರೀದಿ ಮಾಡಿತ್ತು. ಆದ್ರೆ ಗ್ಲೇನ್ ಮ್ಯಾಕ್ಸ್ ವೆಲ್ ಅವರು ನಿರೀಕ್ಷಿತ ಮಟ್ಟದ ಆಟವನ್ನು ಆಡುತ್ತಿಲ್ಲ. ಗ್ಲೇನ್ ಬ್ಯಾಟ್ ನಿಂದ ಸರಾಗವಾಗಿ ರನ್ ಕೂಡ ಹರಿದುಬರುತ್ತಿಲ್ಲ. ಆಡಿರುವ ಐದು ಪಂದ್ಯಗಳಲ್ಲಿ ಮ್ಯಾಕ್ಸ್ ವೆಲ್ ಅವರು ಗಳಿಸಿದ್ದ ರನ್ ಕೇವಲ 41 .
ಒಟ್ಟಿನಲ್ಲಿ ದಿನೇಶ್ ಕಾರ್ತಿಕ್, ಸುನೀಲ್ ನರೇನ್, ಮುರಳಿ ವಿಜಯ್, ರಾಬಿನ್ ಉತ್ತಪ್ಪ ಹಾಗೂ ಗ್ಲೇನ್ ಮ್ಯಾಕ್ಸ್ ವೆಲ್ ವಿಫಲರಾಗಿರೋದು ಆಯಾ ಫ್ರಾಂಚೈಸಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.