ಐಪಿಎಲ್ 2020 | 7 ಸದಸ್ಯರ ಕಾಮೆಂಟೇಟರ್ಸ್ ತಂಡದಲ್ಲಿ ಸಂಜಯ್ ಮಂಜ್ರೇಕರ್ ಗಿಲ್ಲ ಸ್ಥಾನ
ಐಪಿಎಲ್ 2020ಗೆ 7 ಸದಸ್ಯರ ವೀಕ್ಷಕ ವಿವರಣೆಗಾರರ ತಂಡವನ್ನು ಬಿಸಿಸಿಐ ಫೈನಲ್ ಮಾಡಿದ್ದು, ಇದರಲ್ಲಿ ಹೆಸರಾಂತ ವೀಕ್ಷಕ ವಿವರಣೆಗಾರ ಸಂಜಯ್ ಮಂಜ್ರೇಕಲ್ ಅವರನ್ನು ಕೈಬಿಡಲಾಗಿದೆ.
7 ಸದಸ್ಯರ ವೀಕ್ಷಕ ವಿವರಣೆಗಾರರ ತಂಡದಲ್ಲಿ ಸುನಿಲ್ ಗವಾಸ್ಕರ್, ಲಕ್ಷ್ಮಣ ಶಿವರಾಮಕೃಷ್ಣನ್, ಮುರಳಿ ಕಾರ್ತಿಕ್, ಡೀಪ್ ದಾಸ್ಗುಪ್ತಾ, ರೋಹನ್ ಗವಾಸ್ಕರ್, ಹರ್ಷ ಭೋಗ್ಲೆ, ಮತ್ತು ಅಂಜುಮ್ ಚೋಪ್ರಾ ಸೇರಿದ್ದಾರೆ. 2008ರಿಂದಲೂ ಐಪಿಎಲ್ ಕಾಮೆಂಟರಿ ಪ್ಯಾನೆಲ್ನ ಭಾಗವಾಗಿದ್ದ 55 ವರ್ಷದ ಮಂಜ್ರೇಕರ್ ಇದೇ ಮೊದಲ ಬಾರಿಗೆ ಐಪಿಎಲ್ ನಿಂದ ದೂರ ಉಳಿದಿದ್ದಾರೆ.
ಇನ್ನು ಏಳು ಸದಸ್ಯರ ವೀಕ್ಷಕ ವಿವರಣೆಗಾರರ ತಂಡ ಸೆಪ್ಟೆಂಬರ್ 10 ರಂದು ಯುಎಇಗೆ ತೆರಳಲಿದೆ. ಡೀಪ್ ದಾಸ್ಗುಪ್ತಾ ಮತ್ತು ಮುರಳಿ ಕಾರ್ತಿಕ್ ಅಬುಧಾಬಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಉಳಿದವರು ದುಬೈ ಮತ್ತು ಶಾರ್ಜಾದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಸಂಜಯ್ ಮಾಂಜ್ರೇಕರ್ ವಿರುದ್ಧ ಕೆಲವೊಂದು ಆರೋಪಗಳು ಕೇಳಿಬಂದಿದ್ದವು. ಹರ್ಷ ಭೋಗ್ಲೆ ಮತ್ತು ರವೀಂದ್ರ ಜಡೇಜಾ ಬಗ್ಗೆ ಹೇಳಿರುವಂತಹ ಹೇಳಿಕೆಗಳು ಮಾಂಜ್ರೇಕರ್ ಅವರಿಗೆ ಮುಳುವಾಗಿ ಹೋಯ್ತು. ಅಲ್ಲದೆ ಇವರಿಬ್ಬರ ಮೇಲೆ ಹೇಳಿರುವಂತಹ ಹೇಳಿಕೆಗಳನ್ನು ಮಾಂಜ್ರೇಕರ್ ಅವರು ಸಮರ್ಥಿಸಿಕೊಂಡಿದ್ದರು. ಹೀಗಾಗಿ ಬಿಸಿಸಿಐ ಸಂಜಯ್ ಮಾಂಜ್ರೇಕರ್ ಅವರನ್ನು ವೀಕ್ಷಕ ವಿವರಣೆಕಾರರ ತಂಡದಿಂದ ಕೈಬಿಟ್ಟಿದೆ.
ಈ ವರ್ಷ ಐಪಿಎಲ್ 53 ದಿನಗಳ ಪಂದ್ಯಾವಳಿಯಾಗಿದ್ದು, ಫೈನಲ್ ಪಂದ್ಯಗಳು ನವೆಂಬರ್ 10 ರಂದು ನಡೆಯಲಿದೆ.