ಟಿ-ಟ್ವೆಂಟಿ ವಿಶ್ವಕಪ್ ಮತ್ತು ಐಪಿಎಲ್ ಸಂಘಟಿಸುವ ಬಗ್ಗೆ ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಹೇಳುವುದು ಹೀಗೆ…!
ಐಪಿಎಲ್ ಟೂರ್ನಿಯನ್ನು ಪ್ರೇಕ್ಷಕರಿಲ್ಲದೆ ಸಂಘಟಿಸಬಹುದು… ಆದ್ರೆ ಟಿ-ಟ್ವೆಂಟಿ ವಿಶ್ವಕಪ್ ಅನ್ನು ಮಾತ್ರ ಪ್ರೇಕ್ಷಕರಿಲ್ಲದೆ ನಡೆಸುವುದು ಸರಿಯಲ್ಲ. ಈ ಹೇಳಿಕೆ ನೀಡಿದ್ದು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್. ಆದ್ರೆ ಪಟೇಲರ ಈ ಹೇಳಿಕೆಯಲ್ಲಿ ಬಿಸಿಸಿಐನ ಸ್ವಾರ್ಥ ಎದ್ದು ಕಾಣುತ್ತಿದೆ. ಯಾಕಂದ್ರೆ ಟಿ-ಟ್ವೆಂಟಿ ವಿಶ್ವಕಪ್‍ನ ಆತಿಥ್ಯ ವಹಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಪ್ರೇಕ್ಷಕರಿಲ್ಲದೆ ಟೂರ್ನಿಯನ್ನು ಆಡಿಸಬಹುದು ಎಂದು ಐಸಿಸಿ ಮೇಲೆ ಒತ್ತಡ ಹೇರುತ್ತಿದೆ. ಆದ್ರೆ ಐಸಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಹಿಂದೆ ಮುಂದೆ ಯೋಚಿಸುತ್ತಿದೆ. ಕಾರಣ ಕೋವಿಡ್ -19 ಭಯ.
ಆದ್ರೆ ಬಿಸಿಸಿಐಗೆ ಆ ಭಯ, ಆತಂಕವಿಲ್ಲ ಅನ್ಸುತ್ತೆ. ಹೇಗಾದ್ರೂ ಮಾಡಿ 2020ರ ಐಪಿಎಲ್ ಟೂರ್ನಿಯನ್ನು ನಡೆಸಲೇಬೇಕು ಎಂಬ ತೀರ್ಮಾನಕ್ಕೆ ಬಂದಿದೆ. ಅದಕ್ಕೆ ಎಲ್ಲಾ ರೀತಿಯ ಅವಕಾಶಗಳನ್ನು ಬಳಸಿಕೊಳ್ಳಲು ತಂತ್ರಗಳನ್ನು ರೂಪಿಸುತ್ತಿದೆ. ಒಂದು ವೇಳೆ ಐಪಿಎಲ್ ಈ ಬಾರಿ ನಡೆಯದೇ ಇದ್ರೆ ಬಿಸಿಸಿಐ ಬೊಕ್ಕಸಕ್ಕೆ ಸುಮಾರು ನಾಲ್ಕು ಸಾವಿರ ಕೋಟಿ ನಷ್ಟವಾಗಲಿದೆ. ಅದನ್ನು ಸರಿದೂಗಿಸಲು ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಸಂಘಟಿಸಲೇ ಬೇಕು ಎಂಬ ನಿರ್ಧಾರಕ್ಕೆ ಬಂದಿದೆ.
ಇದಕ್ಕೆ ಪೂರಕವಾಗಿ ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಅವರು ಮತ್ತೊಂದು ಸುಳಿವನ್ನು ನೀಡ್ತಾರೆ. ಒಂದು ವೇಳೆ ಭಾರತದಲ್ಲಿ ಐಪಿಎಲ್ ಟೂರ್ನಿಯನ್ನು ನಡೆಸಲು ಸಾಧ್ಯವಾಗದೇ ಇದ್ರೆ ಶ್ರೀಲಂಕಾ ಅಥವಾ ಯುಎಇನಲ್ಲಿ ಟೂರ್ನಿಯನ್ನು ಸಂಘಟಿಸುವ ಬಗ್ಗೆಯೂ ಚಿಕ್ಕ ಸುಳಿವನ್ನು ನೀಡ್ತಾರೆ. ಆದ್ರೆ ಬ್ರಿಜೇಶ್ ಪಟೇಲ್‍ಗೂ ಐಪಿಎಲ್ ಟೂರ್ನಿಯನ್ನು ನಡೆಸಲು ಸಾಧ್ಯನಾ ಎಂಬುದರ ಬಗ್ಗೆ ಅವರಲ್ಲೂ ಸ್ಪಷ್ಟತೆ ಇಲ್ಲ.
ಐಪಿಎಲ್ ಟೂರ್ನಿಗಾಗಿ ನಾವು ಸೆಪ್ಟಂಬರ್ -ಅಕ್ಟೋಬರ್ ತಿಂಗಳನ್ನು ಎದುರು ನೋಡ್ತಾ ಇದ್ದೀವಿ. ಅದು ಕೂಡ ಏಷ್ಯಾ ಕಪ್ ಮತ್ತು ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಮುಂದೂಡಿದ್ರೆ ಮಾತ್ರ. ಒಂದು ವೇಳೆ ಮುಂದೂಡಿದ್ರೂ ಭಾರತ ಸರ್ಕಾರದ ಆದೇಶ ಮತ್ತು ಮಾರ್ಗಸೂಚಿಗಳನ್ನು ನೋಡಿಕೊಳ್ಳಬೇಕಾಗುತ್ತದೆ ಎಂದು ಬ್ರಿಜೇಶ್ ಪಟೇಲ್ ಹೇಳಿದ್ದಾರೆ.
ಏಷ್ಯಾಕಪ್ ಟಿ-ಟ್ವೆಂಟಿ ಟೂರ್ನಿಯು ಸೆಪ್ಬಂಬರ್ ನಲ್ಲಿ ಪಾಕಿಸ್ತಾನದಲ್ಲಿ ನಿಗದಿಯಾಗಿತ್ತು. ಆದ್ರೆ ಭಾರತ ಈ ಟೂರ್ನಿಯಲ್ಲಿ ಆಡಬೇಕಾದ್ರೆ ತಟಸ್ಥ ತಾಣದಲ್ಲಿ ಟೂರ್ನಿಯನ್ನು ಸಂಘಟಿಸಬೇಕು. ಹೀಗಾಗಿ ಟೂರ್ನಿಯನ್ನು ಸಂಘಟಿಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ಮುಂದೆ ಬಂದಿದೆ. ಆದ್ರೆ ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಅದೇ ರೀತಿ ಟಿ-ಟ್ವೆಂಟಿ ವಿಶ್ವಕಪ್ ಅಕ್ಟೋಬರ್ -ನವೆಂಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿತ್ತು. ಈ ಬಗ್ಗೆಯೂ ಐಸಿಸಿ ಮುಂದಿನ ತಿಂಗಳು ನಿರ್ಧಾರ ತೆಗೆದುಕೊಳ್ಳಲಿದೆ.
ಇನ್ನು ಪಟೇಲರು ಹೇಳ್ತಾರೆ…. ಐಪಿಎಲ್ ಟೂರ್ನಿಯನ್ನು ಸಂಘಟಿಸುವುದಾದ್ರೆ ನಮ್ಮ ಮೊದಲ ಆದ್ಯತೆ ಭಾರತದಲ್ಲೇ. ಆದ್ರೆ ಇಲ್ಲಿನ ಪರಿಸ್ಥಿತಿಯನ್ನು ನಾವು ನೋಡಿಕೊಳ್ಳಬೇಕಾಗುತ್ತದೆ. ಈಗಾಗಲೇ ಶ್ರೀಲಂಕಾ ಕ್ರಿಕೆಟ್ ಮಂಡಳಿ ಹಾಗೂ ಯುಎಇ ಕ್ರಿಕೆಟ್ ಮಂಡಳಿಗಳು ಐಪಿಎಲ್ ಟೂರ್ನಿಯ ಆತಿಥ್ಯ ವಹಿಸಲು ಆಸಕ್ತಿಯನ್ನು ವ್ಯಕ್ತಪಡಿಸಿವೆ. ಎಲ್ಲಿ ಆಡಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ನೋಡೋಣ. ಒಂದು ವೇಳೆ ಪ್ರೇಕ್ಷಕರಿಲ್ಲದೆ ಆಡಿಸಿದಾಗ ನೀವು ಎಲ್ಲಿ ಆಡುತ್ತೀರಿ ಎಂಬುದು ಮುಖ್ಯವಾಗಿರಲ್ಲ ಅಂತಾರೆ ಪಟೇಲರು.
ಈ ಹಿಂದೆ 2009 ಮತ್ತು 2014ರಲ್ಲಿ ಭಾರತದಲ್ಲಿ ಲೋಕ ಸಭಾ ಚುನಾವಣೆ ನಡೆದಿದ್ದ ಕಾರಣ ಐಪಿಎಲ್ ಟೂರ್ನಿಯನ್ನು ಕ್ರಮವಾಗಿ ದಕ್ಷಿಣ ಆಫ್ರಿಕಾ ಮತ್ತು ಯುಎಇನಲ್ಲಿ ಸಂಘಟಿಸಲಾಗಿತ್ತು. ಈಗಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಐಪಿಎಲ್ ಟೂರ್ನಿ ಸಂಘಸಿಸುವ ಬಗ್ಗೆ ಕ್ರಿಕೆಟ್ ಮಂಡಳಿ, ಫ್ರಾಂಚೈಸಿಗಳಿಗೆ ಪತ್ರ ಬರೆದಿದ್ದಾರೆ. ಐಪಿಎಲ್ ಟೂರ್ನಿಯನ್ನು ಸಂಘಟಿಸಲು ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳಲು ಬಿಸಿಸಿಐ ಚಿಂತನೆ ಮಾಡುತ್ತಿದೆ ಎಂದು ದಾದಾ ಹೇಳಿದ್ದಾರೆ.
ಇನ್ನು ಐಪಿಎಲ್ ಟೂರ್ನಿಯ ಮಾದರಿಯಲ್ಲಿ ಏನಾದ್ರೂ ಬದಲಾವಣೆ ಮಾಡಲಾಗುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಬ್ರಿಜೇಶ್ ಪಟೇಲ್, ನಾವು ಕೂಡ ಪರಿಪೂರ್ಣವಾದ ಮಾದರಿಯಲ್ಲೇ ಟೂರ್ನಿಯನ್ನು ಆಯೋಜನೆ ಮಾಡಲು ಬಯಸುತ್ತೇವೆ. ಆದ್ರೆ ಏಷ್ಯಾಕಪ್ ಮತ್ತು ಟಿ-ಟ್ವೆಂಟಿ ವಿಶ್ವಕಪ್ ಮೇಲೆ ಅವಲಂಬಿತವಾಗಿದೆ. ಐಪಿಎಲ್ ಬಿಸಿಸಿಐಗೆ ಮಹತ್ವದ ಟೂರ್ನಿಯಾಗಿದೆ. ಹಾಗೇ ಪ್ರಾಯೋಜಕರು, ಬ್ರಾಡ್‍ಕಾಸ್ಟರ್ಸ್, ಫ್ರಾಂಚೈಸಿಗಳು ಮತ್ತು ಆಟಗಾರರಿಗೂ ಮಹತ್ವದ್ದಾಗಿದೆ. ಪ್ರತಿಯೊಬ್ಬ ಆಟಗಾರರು ಮೈದಾನಕ್ಕಿಳಿಯಬೇಕು ಎಂಬ ಕಾತರದಲ್ಲಿದ್ದಾರೆ ಎಂದ್ರು.
ಹಾಗೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಒಂದು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಒಂದು ವೇಳೆ ಟಿ-ಟ್ವೆಂಟಿ ವಿಶ್ವಕಪ್ ನಡೆದ್ರೆ ತಂಡಗಳಿಗೆ ಪೂರ್ವ ತಯಾರಿ ನಡೆಸಲು ಸಮಯವಕಾಶವನ್ನು ನೀಡಬೇಕಾಗುತ್ತದೆ. ಆದ್ರೆ ಪ್ರೇಕ್ಷಕರಿಲ್ಲದ ವಿಶ್ವಕಪ್ ಟೂರ್ನಿ ವಿಶ್ವಕಪ್ ಟೂರ್ನಿಯಾಗಲ್ಲ. ಆದ್ರೆ ಐಪಿಎಲ್ ಟೂರ್ನಿಯನ್ನು ನಾವು ಪ್ರೇಕ್ಷಕರಿಲ್ಲದೆ ಆಡಿಸಬಹುದು ಎಂದು ಬ್ರಿಜೇಶ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.








