ಆರ್ ಸಿಬಿಯ ಬೆಳಕು ಕರ್ನಾಟಕದ ದೇವ್‍ದತ್ತ್ ಪಡಿಕ್ಕಲ್
ದೇವ್‍ದತ್ತ್ ಪಡಿಕ್ಕಲ್… ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್ ಮೆನ್. ಚೊಚ್ಚಲ ಐಪಿಎಲ್ ಟೂರ್ನಿಯಲ್ಲೇ ದೇವ್‍ದತ್ತ್ ಮಿಂಚು ಹರಿಸಿದ್ದಾರೆ. ಕರ್ನಾಟಕದ ಭರವಸೆಯ ಆಟಗಾರನಾಗಿರುವ ದೇವ್‍ದತ್ತ್ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಪಡಿಕ್ಕಲ್ ಅವರು ಸನ್ ರೈಸರ್ಸ್ ಹೈದ್ರಬಾದ್ ತಂಡದ ಗೇಮ್ ಪ್ಲಾನ್ ಗಳನ್ನು ಉಲ್ಟಾಪಲ್ಟಾ ಮಾಡಿದ್ರು. ಸನ್ ರೈಸರ್ಸ್ ಬೌಲರ್ ಗಳ ಮೇಲೆ ಸವಾರಿ ನಡೆಸಿದ್ದ ದೇವ್‍ದತ್ತ್, ಆರ್ ಸಿಬಿ ತಂಡಕ್ಕೆ ಉತ್ತಮ ಆರಂಭವನ್ನೇ ನೀಡಿದ್ರು.
ಆರೋನ್ ಫಿಂಚ್ ಜೊತೆ ಸೇರಿಕೊಂಡು 90 ರನ್ ಗಳ ಜೊತೆಯಾಟವನ್ನ ಆಡಿದ್ದರು. ಅಲ್ಲದೆ ವೈಯಕ್ತಿಕವಾಗಿ ಬಿರುಸಿನ 56 ರನ್ ಕೂಡ ಸಿಡಿಸಿದ್ರು. 42 ಎಸೆತಗಳಲ್ಲಿ ಎಂಟು ಬೌಂಡರಿ ಕೂಡ ಸಿಡಿಸುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡ್ರು, ಅಲ್ಲದೆ ಆರ್ ಸಿಬಿ ತಂಡದ ಸ್ಟಾರ್ ಆಟಗಾರರನಾಗಿ ಹೊರಹೊಮ್ಮುವ ಎಲ್ಲಾ ಸೂಚನೆಗಳನ್ನು ನೀಡಿದ್ದಾರೆ.
20ರ ಹರೆಯದ ದೇವ್‍ದತ್ತ್ ಪಡಿಕ್ಕಲ್ ಅವರು ಈಗಾಗಲೇ ದೇಸಿ ಟೂರ್ನಿಗಳಲ್ಲಿ ರನ್ ಮಳೆಯನ್ನೇ ಸುರಿಸಿದ್ದಾರೆ. ನೀಳ ಕಾಯದ ಎಡಗೈ ಬ್ಯಾಟ್ಸ್ ಮೆನ್ ಆಗಿರುವ ಪಡಿಕ್ಕಲ್, ಚೊಚ್ಚಲ ಐಪಿಎಲ್, ಚೊಚ್ಚಲ ರಣಜಿ ಪಂದ್ಯ, ಲೀಸ್ಟ್ ಎ ಪಂದ್ಯ ಹಾಗೂ ದೇಸಿ ಟಿ-ಟ್ವೆಂಟಿ ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
2000ದಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಎಡಪ್ಪಲ್ ನಲ್ಲಿ ಹುಟ್ಟಿರುವ ದೇವ್‍ದತ್ತ್ ಪಡಿಕ್ಕಲ್ ಅವರ ಹೆತ್ತವರು 2011ರಲ್ಲಿ ಹೈದ್ರಬಾದ್ ನಿಂದ ಬೆಂಗಳೂರಿಗೆ ಶಿಫ್ಟ್ ಆದ್ರು. ಕರ್ನಾಟಕ ಇನ್ಸಿಸ್ಟಿಟ್ಯೂಟ್ ಆಫ್ ಕ್ರಿಕೆಟ್‍ನ ಕೋಚ್ ಇರ್ಫಾನ್ ಸೇಠ್ ಗರಡಿಯಲ್ಲಿ ಪಳಗಿದ್ದ ದೇವ್‍ದತ್ತ್ ಅವರು ಕರ್ನಾಟಕ 16 ಮತ್ತು 19 ವಯೋಮಿತಿ ಟೂರ್ನಿಯಲ್ಲಿ ಆಡಿದ್ದರು. ಬಳಿಕ ಕೆಪಿಎಲ್ ನಲ್ಲಿ ಬಳ್ಳಾರಿ ಟಸ್ಕರ್ಸ್ ತಂಡದ ಪರ ಆಡಿದ್ದರು.








