ಐಪಿಎಲ್ 2020 – ಸೋಲಿನಿಂದ ಹೊರಬಂದ ಕಿಂಗ್ಸ್ ಪಂಜಾಬ್.. ರಾಹುಲ್ ಬಳಗಕ್ಕೆ ಎರಡನೇ ಬಾರಿ ಸೋತ ವಿರಾಟ್ ಪಡೆ
ಕೊನೆಗೂ ಆರು ಸೋಲುಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಹೊರಬಂದಿದೆ.
ಲಾಸ್ಟ್ ಬಾಲ್ ನಲ್ಲಿ ಗೆಲುವಿನ ರನ್ ಗಳಿಸಿದ್ದ ರಾಹುಲ್ ಬಳಗ ಈ ಬಾರಿಯ ಐಪಿಎಲ್ ನಲ್ಲಿ ಎರಡನೇ ಜಯ ದಾಖಲಿಸಿದೆ.
ಆರ್ ಸಿಬಿ ವಿರುದ್ಧ ಸೋತ ಬಳಿಕ ಕಿಂಗ್ಸ್ ತಂಡ ಸತತ ಸೋಲುಗಳನ್ನು ಕಂಡಿತ್ತು.
ಇದೀಗ ಎರಡನೇ ಬಾರಿಯ ಮುಖಾಮುಖಿಯಲ್ಲಿ ಮತ್ತೆ ಆರ್ ಸಿ ತಂಡವನ್ನು ಮಣಿಸಿ ಗೆಲುವಿನ ರುಚಿ ಕಂಡಿದೆ.
ಶಾರ್ಜಾದಲ್ಲಿ ನಡೆದ ಐಪಿಎಲ್ ಟೂರ್ನಿಯ 31ನೇ ಪಂದ್ಯದಲ್ಲಿ ಆರ್ ಸಿಬಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.
ಬಿರುಸಿನ ಆರಂಭ ಪಡೆದ್ರೂ ದೇವದತ್ತ್ ಪಡಿಕ್ಕಲ್ 18 ರನ್ ಗೆ ಔಟಾದ್ರೆ, ಆರೋನ್ ಫಿಂಚ್ 20 ರನ್ ಗೆ ಹೋರಾಟ ಮುಗಿಸಿದ್ರು.
ಮತ್ತೊಂದೆಡೆ ಬ್ಯಾಟಿಂಗ್ ಬಡ್ತಿ ಪಡೆದ ವಾಷಿಂಗ್ಟನ್ ಸುಂದರ್ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರೆ, ಶಿವಮ್ ದುಬೆ 23 ರನ್ ಸಿಡಿಸಿದ್ರು.
ಇನ್ನೊಂದೆಡೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ ಆಕರ್ಷಕ 48 ರನ್ ಸಿಡಿಸಿ ಗಮನ ಸೆಳೆದ್ರು.
ಆದ್ರೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಎಬಿಡಿ ವಿಲಿಯರ್ಸ್ 2 ರನ್ ಗೆ ಸುಸ್ತಾದ್ರು.
ಕೊನೆಯ ಕ್ಷಣದಲ್ಲಿ ಕ್ರಿಸ್ ಮೋರಿಸ್ ಎಂಟು ಎಸೆತಗಳಲ್ಲಿ 25 ರನ್ ದಾಖಲಿಸಿ ಆರ್ ಸಿಬಿಯ ರನ್ ಗತಿಯನ್ನು ಏರಿಸಿದ್ರು.
ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು.
ಸವಾಲನ್ನು ಬೆನ್ನಟ್ಟಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಜೋಡೆತ್ತುಗಳಾದ ರಾಹುಲ್ ಮತ್ತು ಮಯಾಂಕ್ ಅಗರ್ ವಾಲ್ ಉತ್ತಮ ಆರಂಭವನ್ನೇ ನೀಡಿದ್ರು.
ಮೊದಲ ವಿಕೆಟ್‍ಗೆ ಇವರಿಬ್ಬರು 78 ರನ್ ಪೇರಿಸಿದ್ರು. ಈ ಹಂತದಲ್ಲಿ ಮಯಾಂಕ್ ಅಗರ್ ವಾಲ್ 45 ರನ್ ಗಳಿಸಿ ಚಾಹಲ್‍ಗೆ ವಿಕೆಟ್ ಒಪ್ಪಿಸಿದ್ರು.
ನಂತರ ಶಾರ್ಜಾ ಅಂಗಣದಲ್ಲಿ ದರ್ಬಾರು ನಡೆಸಿದ್ದು ಕ್ರಿಸ್ ಗೇಲ್. ಆರಂಭ ಹತ್ತು -ಹನ್ನೇರಡು ಎಸೆತಗಳಲ್ಲಿ ರನ್ ಗಳಿಸಲು ಕ್ರಿಸ್ ಗೇಲ್ ಪರದಾಟ ನಡೆಸಿದ್ರು.
ಆದ್ರೆ ಬ್ಯಾಟಿಂಗ್ ಲಯ ಪಡೆದುಕೊಂಡ ಗೇಲ್ ಐದು ಸಿಕ್ಸರ್ ಗಳನ್ನು ಸಿಡಿಸಿದ್ರು. ಅಲ್ಲದೆ 45 ಎಸೆತಗಳಲ್ಲಿ 53 ರನ್ ಗಳಿಸಿದ್ದಾಗ ರನೌಟಾದ್ರು.
ಇನ್ನು ಕೊನೆಯ ಕ್ಷಣದಲ್ಲಿ ಪಂದ್ಯ ರೋಚಕ ಘಟ್ಟ ತಲುಪಿತ್ತು. ಕೆ.ಎಲ್. ರಾಹುಲ್ ಅಜೇಯ 61 ರನ್ ದಾಖಲಿಸಿದ್ದರು.
ಹಾಗೇ ಕೊನೆಯ ಎಸೆತದಲ್ಲಿ ಗೆಲ್ಲಲು ಒಂದು ರನ್ ಬೇಕಿತ್ತು.
ಆಗ ನಿಕೋಲಾಸ್ ಪೂರನ್ ಅವರು ಸಿಕ್ಸರ್ ಸಿಡಿಸಿ ತಂಡಕ್ಕೆ ರೋಚಕ ಜಯವನ್ನು ಒದಗಿಸಿದ್ರು.
ಕೊನೆಗೂ ಕಿಂಗ್ಸ್ ಪಂಜಾಬ್ ತಂಡ ಎಂಟು ವಿಕೆಟ್ ಗಳಿಂದ ಗೆಲುವಿನ ನಗೆ ಬೀರಿತ್ತು.
ಅಜೇಯ 61 ರನ್ ದಾಖಲಿಸಿದ್ದ ಕೆ.ಎಲ್. ರಾಹುಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.








