ಐಪಿಎಲ್ 2020- ಸಿಎಸ್ ಕೆ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ನೀಡಿದ ಸಾಕ್ಷಿ ಸಿಂಗ್ ಧೋನಿ
ಇದು ಒಂದು ರೀತಿಯ ಆಟ..
ಕೆಲವೊಂದು ಬಾರಿ ಗೆಲುವು…ಕೆಲವೊಂದು ಬಾರಿ ಸೋಲು..
ಹಲವು ವರ್ಷಗಳಿಂದ ರೋಚಕ ಗೆಲುವು ಸಿಕ್ಕಿದೆ…
ಹಾಗೇ ಕೆಲವೊಂದು ಸೋಲುಗಳನ್ನು ಅನುಭವಿಸಬೇಕಾಗುತ್ತದೆ.
ಗೆಲುವನ್ನು ನಾವು ಸಂಭ್ರಮಿಸುತ್ತೇವೆ. ಹಾಗೇ ಎದುರಾಳಿ ತಂಡಗಳ ಹೃದಯವೂ ಛಿದ್ರಗೊಳ್ಳುತ್ತದೆ.
ಕೆಲವು ಗೆಲುವು.. ಕೆಲವು ಸೋಲು.. ಹಾಗೇ ಅವಕಾಶಗಳನ್ನು ಕಳೆದುಕೊಳ್ಳುತ್ತೇವೆ.
ಯಾಕಂದ್ರೆ ಇದು ಒಂದು ಆಟ ಅಷ್ಟೇ..
ನಿಜವಾದ ಸೇನಾನಿಗಳು ಗೆಲುವಿಗಾಗಿ ಹೋರಾಡುತ್ತಾರೆ..
ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದೆ..
ಹೀಗೆ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್ ಧೋನಿ ಅವರು ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದ್ದಾರೆ.
ಹೌದು, ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಅಭಿಮಾನ ಎಂತಹುದ್ದು ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.
ಆದ್ರೆ ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನೀರಸ ಪ್ರದರ್ಶನ ನೀಡಿದೆ. ಹೀಗಾಗಿ ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಆದ್ರೆ ಅಭಿಮಾನಿಗಳ ಬೇಸರವನ್ನು ಅರಿತುಕೊಂಡಿರುವ ಸಾಕ್ಷಿ ಸಿಂಗ್ ಧೋನಿ ಅಭಿಮಾನಿಗಳನ್ನು ಸಮಧಾನಪಡಿಸಲು ಮುಂದಾಗಿದ್ದಾರೆ.
ಆಟದಲ್ಲಿ ಸೋಲು ಗೆಲುವು ಇದ್ದದ್ದೇ. ಅದನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಗೆಲುವು ಸಾಧಿಸಬೇಕು.
ಕಳೆದ 10 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಾಡಿರುವ ಸಾಧನೆಯನ್ನು ಮರೆಯಬಾರದು. ಈ ಬಾರಿ ಸೋತಿರಬಹುದು. ಆದ್ರೆ ಮುಂದಿನ ಬಾರಿ ಮತ್ತೆ ಫಿನಿಕ್ಸ್ ನಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೇಲೆದ್ದು ಬರುತ್ತೆ ಅನ್ನೋದು ಸಾಕ್ಷಿ ಸಿಂಗ್ ಅವರ ಅಭಿಮತವಾಗಿದೆ.
ಅಂದ ಹಾಗೇ, ಈ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ನಿಂದ ಹೊರಬಿದ್ದಿದೆ.
ಸದ್ಯ ಆಡಿರುವ 12 ಪಂದ್ಯಗಳಲ್ಲಿ ಎಂಟು ಪಂದ್ಯಗಳನ್ನು ಸೋತಿದೆ. ನಾಲ್ಕು ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ. ಅಲ್ಲದೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಇನ್ನು ಐಪಿಎಲ್ ಆರಂಭವಾಗುವುದಕ್ಕಿಂತ ಮುನ್ನವೇ ತಂಡದಲ್ಲಿ ಸಾಕಷ್ಟು ಗೊಂದಲಗಳು ಮೂಡಿದ್ದವು.
ಆರಂಭದಲ್ಲೇ ಸುರೇಶ್ ರೈನಾ ತಂಡದಿಂದ ಹೊರನಡೆದಿರುವುದು ದೊಡ್ಡ ಪೆಟ್ಟು. ನಂತರ ಆಟಗಾರರು ಮತ್ತು ಸಿಬ್ಬಂದಿಗಳು ಕೋವಿಡ್ ಸೋಂಕಿನಿಂದ ಬಳಲಿದ್ದರು.
ಈ ನಡುವೆ ತಂಡದ ಮಾಲೀಕ ಎನ್. ಶ್ರೀನಿವಾಸನ್ ಅವರ ಹೇಳಿಕೆಗಳು ಕೂಡ ತಂಡದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರಿತ್ತು. ಮತ್ತೊಂದೆಡೆ ಹರ್ಭಜನ್ ಸಿಂಗ್ ಕೂಡ ತಂಡವನ್ನು ಸೇರಿಕೊಳ್ಳಲಿಲ್ಲ.
ಈ ನಡುವೆ ಹಿರಿಯ ಆಟಗಾರರನ್ನು ಹೆಚ್ಚು ನಂಬಿಕೊಂಡಿದ್ದ ಸಿಎಸ್‍ಕೆ ತಂಡ ಯುವ ಆಟಗಾರರ ಕಡೆಗೆ ಹೆಚ್ಚಿನ ಗಮನವನ್ನೇ ಹರಿಸಲಿಲ್ಲ.
ಹಿರಿಯ ಆಟಗಾರರು ಕೂಡ ಸಮಯಕ್ಕೆ ಸರಿಯಾಗಿ ಆಡಲಿಲ್ಲ. ಅದು ಅಲ್ಲದೆ ನಾಯಕ ಮಹೇಂದ್ರ ಸಿಂಗ್ ಧೋನಿಯ ಬ್ಯಾಟಿಂಗ್ ಫಾರ್ಮ್ ಕೂಡ ಕೈಕೊಟ್ಟಿತ್ತು.
ಸದ್ಯದ 12 ಪಂದ್ಯಗಳಲ್ಲಿ ಧೋನಿ ಗಳಿಸಿದ್ದು ಬರೀ 130 ರನ್ ಮಾತ್ರ.
ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದೇ ಮೊದಲ ಬಾರಿ ಹೀನಾಯ ಪ್ರದರ್ಶನ ನೀಡಿದೆ. ಮೂರು ಬಾರಿ ಚಾಂಪಿಯನ್ ಹಾಗೂ ಐದು ಬಾರಿ ರನ್ನರ್ ಅಪ್ ಆಗಿರುವ ಚೆನ್ನೈ ಐಪಿಎಲ್ ನ ಬಲಿಷ್ಠ ತಂಡ ಅಂತನೇ ಬಿಂಬಿತವಾಗಿತ್ತು.
ಆದ್ರೆ ಎಲ್ಲದಕ್ಕೂ ಒಂದು ಸಮಯ ಅಂತ ಇರುತ್ತೆ. ಕಾಲಚಕ್ರಕ್ಕೆ ತಕ್ಕಂತೆ ನಾವು ಬದಲಾವಣೆಯಾಗಲೇಬೇಕು.
ಅದೇ ರೀತಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಈಗ ಬದಲಾವಣೆಯ ಪರ್ವ ಶುರುವಾಗಿದೆ. ಹೊಸ ತಂಡವನ್ನು ಕಟ್ಟಿ ಮತ್ತೆ ಐಪಿಎಲ್ ನಲ್ಲಿ ಕಳೆದುಹೋಗಿದ್ದ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆದುಕೊಳ್ಳಬೇಕಿದೆ.
ಆದ್ರೆ ಮುಂದಿನ ವರ್ಷ ಧೋನಿ ಸಿಎಸ್‍ಕೆ ತಂಡದ ನಾಯಕನಾಗಿ ಮುಂದುವರಿಯುತ್ತಾರಾ ಅನ್ನೋ ಪ್ರಶ್ನೆಯೊಂದು ಕಾಡುತ್ತಿದೆ.
ಒಂದಂತೂ ಸತ್ಯ.. ಧೋನಿ ತಂಡದಲ್ಲಿ ಆಡಲಿ ಬಿಡಲಿ.. ಮುಂಬರುವ ದಿನಗಳಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿರುತ್ತಾರೆ ಎಂಬುದು ಅಷ್ಟೇ ಸತ್ಯ. ಯಾಕಂದ್ರೆ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಥಾಲಾ..








