ನ್ಯೂಜಿಲೆಂಡ್ ಐಪಿಎಲ್ಗೆ ಆತಿಥ್ಯ ವಹಿಸುತ್ತಿಲ್ಲ – ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಸ್ಪಷ್ಟನೆ…!
2020ರ ಐಪಿಎಲ್ ಟೂರ್ನಿ ನಡೆಯುತ್ತೋ ಇಲ್ವೋ ಗೊತ್ತಿಲ್ಲ. ಆದ್ರೂ 2020ರ ಐಪಿಎಲ್ ಟೂರ್ನಿ ಬಗ್ಗೆ ಚರ್ಚೆ ಹಾಗೂ ನಾನಾ ರೀತಿಯ ಸುದ್ದಿಗಳು ಬರ್ತಾನೆ ಇರುತ್ತವೆ. ಈಗಾಗಲೇ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಪ್ಲಾನ್ ಮಾಡಿಕೊಳ್ಳುತ್ತಿದೆ. ಏಷ್ಯಾಕಪ್ ಮತ್ತು ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಗಳು ರದ್ದುಗೊಂಡ್ರೆ ಆ ಟೈಮ್ ನಲ್ಲಿ ಐಪಿಎಲ್ ಆಯೋಜನೆ ಮಾಡೋದು ಬಿಸಿಸಿಐನ ಪ್ಲಾನ್ ಆಗಿದೆ.
ಆದ್ರೆ ಭಾರತದ ಸದ್ಯದ ಪರಿಸ್ಥಿತಿಯನ್ನು ನೋಡಿದ್ರೆ ಮುಂದಿನ ಮೂರು ನಾಲ್ಕು ತಿಂಗಳು ಐಪಿಎಲ್ ಬಿಡಿ, ಜನ ಓಡಾಡುವುದೇ ಕಷ್ಟಕರವಾಗಲಿದೆ. ಆ ಮಟ್ಟದಲ್ಲಿ ಭಾರತದಲ್ಲಿ ಕೊರೋನಾ ಸೋಂಕು ಹರಡುತ್ತಿದೆ. ಆದ್ರೂ ಬಿಸಿಸಿಐ ಮಾತ್ರ 2020ರ ಐಪಿಎಲ್ ಟೂರ್ನಿಯನ್ನು ಸಂಘಟಿಸುವ ಲೆಕ್ಕಚಾರವನ್ನೂ ಹಾಕಿಕೊಂಡಿದೆ.
ಒಂದು ವೇಳೆ ಭಾರತದಲ್ಲಿ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಲು ಅಸಾಧ್ಯವಾದ್ರೆ ವಿದೇಶಿ ನೆಲದಲ್ಲೂ ಆಯೋಜನೆ ಮಾಡುವ ಯೋಜನೆ ಬಿಸಿಸಿಐನದ್ದಾಗಿದೆ. ಈಗಾಗಲೇ ಶ್ರೀಲಂಕಾ ಮತ್ತು ಯುಎಇ ಕ್ರಿಕೆಟ್ ಮಂಡಗಳಿಗಳು ಐಪಿಎಲ್ ಆಯೋಜನೆಗೆ ಮುಂದೆ ಬಂದಿವೆ. ಮತ್ತೊಂದೆಡೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯೂ ಆಸಕ್ತಿ ಹೊಂದಿದೆ ಎಂಬ ಸುದ್ದಿನೂ ಕೇಳಿಬಂದಿತ್ತು.
ಆದ್ರೆ ಈಗ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಈ ಬಗ್ಗೆ ಸ್ಪಷ್ಟನೇ ನೀಡಿದೆ. ಇದೆಲ್ಲಾ ಸುಳ್ಳು. ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯು ಬಿಸಿಸಿಐ ಬಳಿ ಐಪಿಎಲ್ ಆಯೋಜನೆ ಮಾಡಲು ಆಸಕ್ತಿ ಹೊಂದಿದ್ದೇವೆ ಅನ್ನೋ ಪ್ರಸ್ತಾವನ್ನೇ ಮಾಡಿಲ್ಲ. ಇದು ಸತ್ಯಕ್ಕೆ ದೂರವಾದ ವಿಚಾರ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ವಕ್ತಾರ ರಿಚರ್ಡ್ ಬೂಕ್ ಹೇಳಿದ್ದಾರೆ.
ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಐಪಿಎಲ್ ಆಯೋಜನೆ ಮಾಡುತ್ತೆ ಅನ್ನೋ ವರದಿಯನ್ನು ನಂಬಬೇಡಿ. ನಾವು ಬಿಸಿಸಿಐಗೆ ಈ ಬಗ್ಗೆ ಮನವಿ ಕೂಡ ಮಾಡಿಲ್ಲ. ಪ್ರಸ್ತಾಪ ಕೂಡ ಸಲ್ಲಿಸಿಲ್ಲ ಅಂತ ರಿಚರ್ಡ್ ಬೂಕ್ ಹೇಳಿದ್ದಾರೆ.
ಅಂದ ಹಾಗೇ ನ್ಯೂಜಿಲೆಂಡ್ ಕೋವಿಡ್-19 ಗೆದ್ದ ಮೊದಲ ದೇಶ. ಹೀಗಾಗಿ ನ್ಯೂಜಿಲೆಂಡ್ ನಲ್ಲಿ ಐಪಿಎಲ್ ನಡೆಸಬಹುದು. ಅಲ್ಲಿನ ಕ್ರಿಕೆಟ್ ಮಂಡಳಿ ಬಿಸಿಸಿಐ ಬಳಿ ಪ್ರಸ್ತಾಪ ಮಾಡಿದೆ ಎಂದು ಕಳೆದ ವಾರ ಸುದ್ದಿಯಾಗಿತ್ತು. ಇದೀಗ ಎಲ್ಲಾ ಗಾಸೀಪ್ಗಳಿಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತೆರೆ ಎಳೆದಿದೆ.
ಈಗಾಗಲೇ ಐಪಿಎಲ್ ಟೂರ್ನಿ ಎರಡು ಬಾರಿ ವಿದೇಶಿ ನೆಲದಲ್ಲಿ ನಡೆದಿತ್ತು. 2009ರಲ್ಲಿ ದಕ್ಷಿಣ ಆಫ್ರಿಕಾ ಮತ್ತು 2014ರಲ್ಲಿ ಯುಎಇ ನಲ್ಲಿ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಲಾಗಿತ್ತು. ಆಗ ಭಾರತದಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು. ಭದ್ರತಾ ಹಿತದೃಷ್ಟಿಯಿಂದ ಎರಡು ಬಾರಿ ಐಪಿಎಲ್ ಟೂರ್ನಿಯನ್ನು ವಿದೇಶಕ್ಕೆ ಶಿಫ್ಟ್ ಮಾಡಲಾಗಿತ್ತು. ಇದೀಗ ಮೂರನೇ ಬಾರಿ ಆಗುತ್ತಾ ಅನ್ನೋದನ್ನು ಕಾದು ನೋಡಬೇಕು.