ಎಂಚಿನ (ಎಂಥಾ) ಕ್ಯಾಚ್ ಮಾರ್ರೆ.. ಅನ್ನಿಸಿಕೊಂಡವ ಐದು ವರ್ಷಗಳ ಹಿಂದೆ ವೀಲ್ ಚೇರ್ ನಲ್ಲಿ ಓಡಾಡುತ್ತಿದ್ದ..!
2020ರ ಐಪಿಎಲ್ ಟೂರ್ನಿ ಹಲವಾರು ರೋಚಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಅಚ್ಚರಿಯ ಬ್ಯಾಟಿಂಗ್, ನಾಟಕೀಯ ತಿರುವು, ಸಿಕ್ಸರ್ ಗಳ ಭರಾಟೆಯ ಮೂಲಕ ಪಂದ್ಯದ ಗತಿಯನ್ನು ಬದಲಾಯಿಸುವಂತೆ ಮಾಡುತ್ತಿದೆ. ಅದೇ ರೀತಿ ಅದ್ಭುತ ಕ್ಯಾಚ್ ಹಾಗೂ ಫೀಲ್ಡಿಂಗ್ ಮೂಲಕವೂ ಆಟಗಾರರು ಗಮನ ಸೆಳೆಯುತ್ತಿದ್ದಾರೆ.
ಎರಡು ದಿನಗಳ ಹಿಂದಿನ ಪಂದ್ಯ. ರಾಜಸ್ತಾನ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ನಡುವಿನ ಪಂದ್ಯ ರೋಚಕವಾಗಿಯೇ ಅಂತ್ಯಗೊಂಡಿತ್ತು. ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಮೊತ್ತವನ್ನು ಬೆನ್ನಟ್ಟಿ ಗೆಲುವು ಸಾಧಿಸಿದ್ದ ಹಿರಿಮೆಗೆ ರಾಜಸ್ತಾನ ರಾಯಲ್ಸ್ ತಂಡ ಪಾತ್ರವಾಗಿತ್ತು.
ಮಯಾಂಕ್ ಅಗರ್ ವಾಲ್, ಕೆ.ಎಲ್. ರಾಹುಲ್ ಮತ್ತು ಸಂಜುಸಾಮ್ಸನ್ ಅವರ ಸ್ಥಿರ ಪ್ರದರ್ಶನ ಬ್ಯಾಟಿಂಗ್ ವೈಖರಿಯನ್ನು ರಾಜಸ್ತಾನ ರಾಯಲ್ಸ್ ತಂಡದ ರಾಹುಲ್ ಟೆವಾಟಿಯಾ ಅವರು ಏಳು ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ಮರೆ ಮಾಚುವಂತೆ ಮಾಡಿದ್ದರು.
ಈ ನಡುವೆ, ಅಲ್ಲಿ ಗಮನ ಸೆಳೆದಿದ್ದು ಕಿಂಗ್ಸ್ ಇಲೆವೆನ್ ತಂಡದ ಆಟಗಾರ ನಿಕೊಲಾಸ್ ಪೂರನ್. ಬ್ಯಾಟಿಂಗ್ ನಲ್ಲಿ ನಿರಾಸೆ ಮೂಡಿಸಿದ್ರೂ ತನ್ನ ಅದ್ಭುತ ಫೀಲ್ಡಿಂಗ್ ಮೂಲಕ ಮಿಂಚು ಹರಿಸಿದ್ದರು. ಸಂಜು ಸಾಮ್ಸನ್ ಹೊಡೆದ ಚೆಂಡನ್ನು ್ನ ಬೌಂಡರಿ ಲೈನ್ ನಲ್ಲಿ ಗಾಳಿಯಲ್ಲಿ ತೇಲಾಡುತ್ತಾ ತಡೆದು ತಂಡಕ್ಕೆ ಎರಡು ರನ್ ಸೇವ್ ಮಾಡಿದ್ದರು.
ಆದ್ರೆ ಪೂರನ್ ಅವರ ಈ ಕ್ಷೇತ್ರ ರಕ್ಷಣೆಗೆ ಇಡೀ ಕ್ರಿಕೆಟ್ ಜಗತ್ತೇ ತಲೆಬಾಗಿದೆ. ಕ್ರಿಕೆಟ್ ದೇವ್ರು ಸಚಿನ್ ತೆಂಡುಲ್ಕರ್ ಕೂಡ ನಿಕೊಲಾಸ್ ಪೂರನ್ ಅವರ ಬದ್ಧತೆಗೆ ಸಲಾಂ ಅಂದಿದ್ದಾರೆ. ಇನ್ನು ಕೆಲವರು ಫೀಲ್ಡಿಂಗ್ ಮಾಂತ್ರಿಕ ಜಾಂಟಿ ರೋಡ್ಸ್‍ಗೂ ಹೋಲಿಕೆ ಮಾಡಿದ್ದರು.
ಆದ್ರೆ ಇದೇ ನಿಕೊಲಾಸ್ ಪೂರನ್ ಅವರು ಐದು ವರ್ಷಗಳ ಹಿಂದೆ ವೀಲ್ ಚೇರ್ ನಲ್ಲಿ ಓಡಾಡುತ್ತಿದ್ದರು. ವೆಸ್ಟ್ ಇಂಡೀಸ್ ಈ ಆಟಗಾರ ಮತ್ತೆ ಆಡುತ್ತೇನೆ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ. 2015ರಲ್ಲಿ ನಡೆದ ಅಪಘಾತದಲ್ಲಿ ಪೂರನ್ ಅವರು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಸರಿಯಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಎರಡು ಬಾರಿ ಶಸ್ತ್ರಚಿಕಿತ್ಸೆ ಮಾಡಿದ ನಂತರ ಮತ್ತೆ ನಡೆದಾಡಲು ಸಾಧ್ಯವಾಯ್ತು. ತನ್ನ ಕ್ರಿಕೆಟ್ ಬದುಕು ಮುಗಿದೇ ಹೋಯ್ತು ಅಂತ ಕಣ್ಣೀರಿಟ್ಟಿದ್ದರು. ಆದ್ರೆ ಹಠ ಬಿಡದ ನಿಕೊಲಾಸ್ ಪೂರನ್ ಕಾಲು ನೋವು ಗುಣಮುಖವಾಗುತ್ತಿದ್ದಂತೆ ಮತ್ತೆ ಅಭ್ಯಾಸ ಶುರು ಮಾಡಿದ್ದರು. ಕ್ರಮೇಣ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ಕೂಡ ಪಡೆದುಕೊಂಡ್ರು. ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಾ ತನ್ನ ಅದ್ಭುತ ಡೈವ್ ಮೂಲಕ ಕ್ರಿಕೆಟ್ ಜಗತ್ತನ್ನೇ ಬೆರಗುಗೊಳ್ಳುವಂತೆ ಮಾಡಿದ್ದಾರೆ.








