ಐಪಿಎಲ್ 2020 – ರಾಹುಲ್ ಬೊಂಬಾಟ್ ಆಟ.. ಆರ್ ಸಿಬಿಗೆ ಹೀನಾಯ ಸೋಲು..
ನಾಯಕ ಕೆ.ಎಲ್. ರಾಹುಲ್ ಅವರ ಅಜೇಯ ಶತಕ ಹಾಗೂ ರವಿ ಬಿಶ್ನೋಯ್ ಮತ್ತು ಮುರುಗನ್ ಅಶ್ವಿನ್ ಅವರ ಸ್ಪಿನ್ ಮ್ಯಾಜಿಕ್ ನ ನೆರವನ್ನು ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 97 ರನ್ ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪರಾಭವಗೊಳಿಸಿತು.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ಆರ್ ಸಿಬಿಯ ಲೆಕ್ಕಚಾರಗಳನ್ನು ಕೆ.ಎಲ್. ರಾಹುಲ್ ಬುಡಮೇಲು ಮಾಡಿದ್ರು. ಮಯಾಂಕ್ ಅಗರ್‍ವಾಲ್ (26) ಹಾಗೂ ಕೆ.ಎಲ್. ರಾಹುಲ್ (ಅಜೇಯ 132) ಆಕ್ರಮಣಕಾರಿ ಆಟವನ್ನಾಡಿದ್ರು. ಕೆ.ಎಲ್. ರಾಹುಲ್ ಅವರ ಆರ್ಭಟಕ್ಕೆ ಕಡಿವಾಣ ಹಾಕಲು ಆರ್ ಸಿಬಿ ಬೌಲರ್ ಗಳು ಪರದಾಟ ನಡೆಸಿದ್ರು. ಬೌಂಡರಿ ಮತ್ತು ಸಿಕ್ಸರ್ ಗಳ ಸುರಿಮಳೆಗೈದ ಕೆ.ಎಲ್. ರಾಹುಲ್ ಇಡೀ ಪಂದ್ಯವನ್ನು ಪರವಶಮಾಡಿಕೊಂಡ್ರು. ಅಲ್ಲದೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಶತಕ ಸಿಡಿಸಿದ ಹೆಗ್ಗಳಿಕೆಗೂ ಪಾತ್ರರಾದ್ರು. ಇನ್ನೊಂದೆಡೆ ನಿಕೊಲಾಸ್ ಪೂರನ್ (17) ಹಾಗೂ ಗ್ಲೇನ್ ಮ್ಯಾಕ್ಸ್ ವೆಲ್ (5) ನಿರಾಸೆ ಅನುಭವಿಸಿದ್ರೂ ರಾಹುಲ್ ಅವರ ಭರ್ಜರಿ ಬ್ಯಾಟಿಂಗ್ ಮುಂದೆ ಕಿಂಗ್ಸ್ ಇಲೆವೆನ್ ತಂಡ ಬೃಹತ್ ಮೊತ್ತ ದಾಖಲಿಸಲು ಯಶಸ್ವಿಯಾಯ್ತು. ಕರುಣ್ ನಾಯರ್ 8 ಎಸೆತಗಳಲ್ಲಿ ಅಜೇಯ 15 ರನ್ ಸಿಡಿಸಿದ್ರು.
ಇನ್ನು ಆರ್ ಸಿಬಿ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ ಕೆ.ಎಲ್. ರಾಹುಲ್, 69 ಎಸೆತಗಳಲ್ಲಿ 14 ಬೌಂಡರಿ ಮತ್ತು ಏಳು ಸಿಕ್ಸರ್ ಗಳ ಸಹಾಯದಿಂದ ಅಜೇಯ 132 ರನ್ ದಾಖಲಿಸಿದ್ರು. ಅಂತಿಮವಾಗಿ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡ ನಿಗದಿತ 3 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು.
ಕಠಿಣ ಸವಾಲನ್ನು ಬೆನ್ನಟ್ಟಿದ್ದ ಆರ್ ಸಿಬಿ ತಂಡ ಆರಂಭದಲ್ಲೇ ಆಘಾತದ ಮೇಲೆ ಆಘಾತ ಅನುಭವಿಸಿತ್ತು. ಆರಂಭಿಕ ದೇವ್‍ದತ್ ಪಡಿಕ್ಕಲ್ 1 ರನ್ ಗೆ ಸೀಮಿತವಾದ್ರೆ, ಜೋಶ್ ಫಿಲಿಪ್ ಶೂನ್ಯ ಸುತ್ತಿದ್ರು. ನಾಯಕ ವಿರಾಟ್ ಕೊಹ್ಲಿ ಹೋರಾಟ 1 ರನ್ ಗೆ ಅಂತ್ಯಗೊಂಡಿತ್ತು.
ಮತ್ತೊಂದೆಡೆ ಆರೋನ್ ಫಿಂಚ್ (20), ಎಬಿಡಿ ವಿಲಿಯರ್ಸ್ (28) ಮತ್ತು ವಾಷಿಂಗ್ಟನ್ ಸುಂದರ್ (30) ಕೊಂಚ ಮಟ್ಟಿನ ಪ್ರತಿರೋಧ ಒಡ್ಡಿದ್ರೂ ಹೆಚ್ಚು ಸಮಯ ಕ್ರೀಸ್ ನಲ್ಲಿ ಉಳಿಯಲಿಲ್ಲ. ಅಂತಿಮವಾಗಿ ಆರ್ ಸಿಬಿ ತಂಡ 17 ಓವರ್ ಗಳಲ್ಲಿ 109 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಹೀನಾಯ ಸೋಲು ಅನುಭವಿಸಿತ್ತು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ರವಿ ಬಿಶ್ನೋಯ್ ಮತ್ತು ಮುರುಗನ್ ಅಶ್ವಿನ್ ತಲಾ ಮೂರು ವಿಕೆಟ್ ಉರುಳಿಸಿದ್ರೆ, ಶೆಲ್ಡನ್ ಕಾರ್ಟೆಲ್ ಎರಡು ವಿಕೆಟ್ ಕಬಳಿಸಿದ್ರು. ಅಜೇಯ ಶತಕ ಸಿಡಿಸಿದ ಕೆ.ಎಲ್. ರಾಹುಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.








