ರಶೀದ್ ಖಾನ್ ಕಣ್ಣೀರು… ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಅಮ್ಮನಿಗೆ ಅರ್ಪಣೆ..!
4 ಓವರ್, 0 ಮೇಡನ್, 14 ರನ್, 3 ವಿಕೆಟ್, 0 ನೋಬಾಲ್, 0 ವೈಡ್, 3.50 ಸರಾಸರಿ..
ಇದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಸನ್ ರೈಸರ್ಸ್ ಹೈದ್ರಬಾದ್ ತಂಡದ ಸ್ಪಿನ್ನರ್ ರಶೀದ್ ಖಾನ್ ಅವರ ಬೌಲಿಂಗ್ ಅಂಕಿ ಅಂಶಗಳು.
ಹೌದು, ರಶೀದ್ ಖಾನ್ ಹೈದ್ರಬಾದ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ಬ್ಯಾಟ್ಸ್ ಮೆನ್ ಗಳಾದ ಶಿಖರ್ ಧವನ್, ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಅವರ ವಿಕೆಟ್ ಗಳನ್ನು ಉರುಳಿಸುವ ಮೂಲಕ ತಂಡಕ್ಕೆ ಗೆಲುವು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ರಶೀದ್ ಖಾನ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನಕ್ಕೆ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಒಲಿದು ಬಂತು. ಪಂದ್ಯ ಗೆದ್ದ ಖುಷಿಯಲ್ಲಿದ್ದ ರಶೀದ್ ಖಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಾಗ ಭಾವುಕರಾದ್ರು. ಗೆಲುವಿನ ಖುಷಿಯಲ್ಲೇ ಕಣ್ಣೀರಿಟ್ಟರು.
ಇದಕ್ಕೆ ಕಾರಣ ರಶೀದ್ ಖಾನ್ ಅವರ ಅಮ್ಮ. ಐಪಿಎಲ್ ನಲ್ಲಿ ರಶೀದ್ ಖಾನ್ ಗೆ ತನ್ನದೇ ಆದ ಅಭಿಮಾನ ಬಳಗವಿದೆ. ಆದ್ರೆ ರಶೀದ್ ಖಾನ್ ದೊಡ್ಡ ಅಭಿಮಾನಿ ಅಂದ್ರೆ ಅವರ ಅಮ್ಮ. ಆದ್ರೆ ಈ ಬಾರಿಯ ಐಪಿಎಲ್ ನಲ್ಲಿ ರಶೀದ್ ಖಾನ್ ಅವರ ಸಾಧನೆಯನ್ನು ನೋಡಿ ಕಣ್ತುಂಬಿಕೊಳ್ಳಲು ಅವರ ಅಮ್ಮನೇ ಇಲ್ಲ. ಅಮ್ಮನನ್ನು ಕಳೆದುಕೊಂಡಿರು ರಶೀದ್ ಖಾನ್ ಇದೇ ವೇಳೆ ನೆನಪಿಸಿಕೊಂಡ್ರು. ಅಲ್ಲದೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತನ್ನ ಪ್ರೀತಿಯ ಅಮ್ಮನಿಗೆ ಅರ್ಪಣೆ ಮಾಡಿದ್ರು.
ಕಳೆದ ಒಂದೂವರೆ ವರ್ಷದಿಂದ ತುಂಬಾನೇ ನೋವನ್ನು ಅನುಭವಿಸಿದ್ದೇನೆ. ಮೊದಲು ನನ್ನ ತಂದೆಯನ್ನು ಕಳೆದುಕೊಂಡೆ. ಕಳೆದ ಜೂನ್ ನಲ್ಲಿ ಅಮ್ಮನನ್ನು ಕಳೆದುಕೊಂಡೆ. ಈ ಆಘಾತದಿಂದ ನಾನಿನ್ನು ಹೊರಬಂದಿಲ್ಲ. ನನ್ನ ಅಮ್ಮ ನನ್ನ ದೊಡ್ಡ ಅಭಿಮಾನಿಯಾಗಿದ್ದರು. ನಾನು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಾಗ ರಾತ್ರಿ ನನ್ನ ಜೊತೆ ಮಾತನಾಡುತ್ತಿದ್ದರು ಎಂದಾಗ ರಶೀದ್ ಖಾನ್ ಕಣ್ಣಲ್ಲಿ ಕಣ್ಣೀರು ಸುರಿಯುತ್ತಿತ್ತು.
ಒಟ್ಟಿನಲ್ಲಿ ಅಫಘಾನಿಸ್ತಾನದ ರಶೀದ್ ಖಾನ್ ಸನ್ ರೈಸರ್ಸ್ ಹೈದ್ರಬಾದ್ ತಂಡ ಟ್ರಂಪ್ ಕಾರ್ಡ್ ಬೌಲರ್. ಅದೇ ರೀತಿ ನಾಯಕ ಡೇವಿಡ್ ವಾರ್ನರ್ ಅವರ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರ.