ಐಪಿಎಲ್ 2020- ಮುಗಿದಿಲ್ಲ ಇನ್ನೂ ಸನ್ ರೈಸರ್ಸ್ ಹೋರಾಟ.. ಡೆಲ್ಲಿ ಕ್ಯಾಪಿಟಲ್ಸ್ ಗೆ ಸತತ ಮೂರನೇ ಸೋಲು
ಸನ್ ರೈಸರ್ಸ್ ಹೈದ್ರಬಾದ್ ತಂಡದ ಪ್ಲೇ ಆಫ್ ಕನಸು ಇನ್ನೂ ಜೀವಂತವಾಗಿದೆ.
ಐಪಿಎಲ್ ಟೂರ್ನಿಯ 47ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡ 88 ರನ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪರಾಭವಗೊಳಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿ ಒತ್ತಡಕ್ಕೆ ಸಿಲುಕಿದೆ.
ದುಬೈನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.
ಆದ್ರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಲೆಕ್ಕಚಾರಗಳು ಆರಂಭದಲ್ಲೇ ಬುಡಮೇಲಾದವು.
ಆರಂಭಿಕ ಡೇವಿಡ್ ವಾರ್ನರ್ ಮತ್ತು ವೃದ್ದಿಮಾನ್ ಶಾಹ ಅವರು ಡೆಲ್ಲಿ ಬೌಲರ್ ಗಳಿಗೆ ಸವಾಲಾಗಿ ಪರಿಣಮಿಸಿದ್ರು.
ಟೂರ್ನಿಯಲ್ಲಿ ಮೊದಲ ಪಂದ್ಯವನ್ನಾಡಿದ್ದ ವೃದ್ದಿಮಾನ್ ಶಾಹ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ರು.
ಡೇವಿಡ್ ವಾರ್ನರ್ ಮತ್ತು ವೃದ್ದಿಮಾನ್ ಶಾಹ ಅವರು 9.4 ಓವರ್ ಗಳಲ್ಲಿ 107 ರನ್ ಗಳಿಸಿ ಬೃಹತ್ ಮೊತ್ತ ಪೇರಿಸುವ ಸೂಚನೆ ನೀಡಿದ್ರು.
ಈ ಹಂತದಲ್ಲಿ ಡೇವಿಡ್ ವಾರ್ನರ್ ಅವರು 34 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ 66 ರನ್ ದಾಖಲಿಸಿದ್ರು.
ಇನ್ನೊಂದೆಡೆ ವೃದ್ದಿಮಾನ್ ಶಾಹ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ರು.
45 ಎಸೆತಗಳಲ್ಲಿ 12 ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ ವೃದ್ದಿಮಾನ್ ಶಾಹ ಅವರು ಆಕರ್ಷಕ 87 ರನ್ ಗಳಿಸಿದ್ರು.
ನಂತರ ಮನೀಷ್ ಪಾಂಡೆ ಅವರು 31 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ನ ನೆರವಿನಿಂದ ಅಜೇಯ 44 ರನ್ ಗಳಿಸಿದ್ರು.
ಹಾಗೇ ಕೇನ್ ವಿಲಿಯಮ್ಸನ್ ಅವರು ಅಜೇಯ 10 ರನ್ ದಾಖಲಿಸಿದ್ರು.
ಅಂತಿಮವಾಗಿ ಸನ್ ರೈಸರ್ಸ್ ಹೈದ್ರಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 219 ರನ್ ದಾಖಲಿಸಿತು.
ಗೆಲ್ಲಲು ಕಠಿಣ ಸವಾಲನ್ನು ಎದುರಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ಆಘಾತ ಅನುಭವಿಸಿತ್ತು.
ಡೆಲ್ಲಿ ತಂಡದ ಸ್ಟಾರ್ ಆಟಗಾರ ಶಿಖರ್ ಧವನ್ ಡಕೌಟಾದ್ರು. ನಂತರ ಮಾರ್ಕೊಸ್ ಸ್ಟೋನಿಸ್ ಐದು ರನ್ ಗೆ ಸೀಮಿತವಾದ್ರು. ಶಿಮ್ರೋನ್ ಹೆಟ್ಮೇರ್ 16 ರನ್ ಗೆ ಹೋರಾಟ ಮುಗಿಸಿದ್ರು.
ಮತ್ತೊಂದೆಡೆ ಅಜ್ಯಂಕ್ಯಾ ರಹಾನೆ 26 ರನ್ ಗಳಿಸಿ ಔಟಾದ್ರು. ಶ್ರೇಯಸ್ ಅಯ್ಯರ್ ಆಟ 7 ರನ್ ಗೆ ಕೊನೆಗೊಂಡಿತ್ತು.
ಇನ್ನೊಂದೆಡೆ ರಿಷಬ್ ಪಂತ್ 36 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.
ಇನ್ನುಳಿದಂತೆ ಅಕ್ಷರ್ ಪಟೇಲ್ 1 ರನ್, ಕಾಗಿಸೊ ರಬಾಡ 3 ರನ್, ಆರ್ ಅಶ್ವಿನ್ 7 ರನ್ ಗಳಿಸಿದ್ರು. ತುಷಾರ್ ದೇಶಪಾಂಡೆ ಅಜೇಯ 20 ರನ್ ಸಿಡಿಸಿದ್ರು.
ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 19 ಓವರ್ ಗಳಲ್ಲಿ 131 ರನ್ ಗಳಿಸಿ ಆಲೌಟ್ ಆಯ್ತು.
ಸನ್ ರೈಸರ್ಸ್ ಹೈದ್ರಬಾದ್ ತಂಡದ ಪರ ರಶೀದ್ ಖಾನ್ ಮೂರು ವಿಕೆಟ್ ಕಬಳಿಸಿ ಡೆಲ್ಲಿಗೆ ಕಂಟಕವಾಗಿ ಪರಿಣಮಿಸಿದ್ರು. ಸಂದೀಪ್ ಶರ್ಮಾ ಮತ್ತು ನಟರಾಜ್ ತಲಾ ಎರಡು ವಿಕೆಟ್ ಪಡೆದ್ರು.
ಮಿಂಚಿನ ಆಟವಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೃದ್ದಿಮಾನ್ ಶಾಹ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.