ಐಪಿಎಲ್ 2020- ರೋಹಿತ್ ಶರ್ಮಾ ಆಟಕ್ಕೆ ಮನಸೋತ ಶಾರೂಕ್ ಹುಡುಗರು..!
ಮುಂಬೈ ಇಂಡಿಯನ್ಸ್ ಗೆಲುವಿನ ಲಯ ಕಂಡಿದೆ. ಮೊದಲ ಪಂದ್ಯದ ಸೋಲಿನಿಂದ ಎಚ್ಚೆತ್ತುಕೊಂಡಿರುವ ರೋಹಿತ್ ಬಳಗ ಎರಡನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 49 ರನ್ ಗಳಿಂದ ಪರಾಭವಗೊಳಿಸಿದೆ.
ಟಾಸ್ ಸೋತ್ರೂ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭ ಆಘಾತ ಅನುಭವಿಸಿತ್ತು. ಆರಂಭಿಕ ಕ್ವಿಂಟನ್ ಡಿಕಾಕ್ ಒಂದು ರನ್ ಗಳಿಸಿ ನಿರಾಸೆ ಅನುಭವಿಸಿದ್ರು. ಆದ್ರೆ ಬಂಡೆಯಂತೆ ನಿಂತು ಕೆಕೆಆರ್ ಬೌಲರ್‍ಗಳ ಮೇಲೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಸವಾರಿ ನಡೆಸಿದ್ರು. ಎರಡನೇ ವಿಕೆಟ್‍ಗೆ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ 90 ರನ್ ಗಳ ಜೊತೆಯಾಟವನ್ನು ಆಡಿದ್ರು. ಈ ಹಂತದಲ್ಲಿ 47 ರನ್ ಗಳಿಸಿದ್ದ ಸೂರ್ಯಕುಮಾರ್ ರನೌಟಾದ್ರು. ಮತ್ತೊಂದೆಡೆ ಸೌರಭ್ ತಿವಾರಿ 13 ಎಸೆತಗಳಲ್ಲಿ 21 ರನ್ ಸಿಡಿಸಿ ತನ್ನ ಹೋರಾಟವನ್ನು ಮುಗಿಸಿದ್ರು.
ಈ ನಡುವೆ ರೋಹಿತ್ ಶರ್ಮಾ ಆಕರ್ಷಕ ಸಿಕ್ಸರ್ ಗಳ ಮೂಲಕ ತಂಡದ ರನ್ ಗತಿಯನ್ನೂ ಏರಿಸಿದ್ರು. 54 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಆರು ಸಿಕ್ಸರ್ ಗಳ ಸಹಾಯದಿಂದ ರೋಹಿತ್ ಆಕರ್ಷಕ 80 ರನ್ ದಾಖಲಿಸಿದ್ರು. ಬಳಿಕ ಹಾರ್ದಿಕ್ ಪಾಂಡ್ಯ 13 ಎಸೆತಗಳಲ್ಲಿ 18 ರನ್ ಗಳಿಸಿ ಹಿಟ್ ವಿಕೆಟ್ ಆದ್ರು. ಇನ್ನು ಕೊನೆಯ ಕ್ಷಣದಲ್ಲಿ ಕಿರಾನ್ ಪೊಲಾರ್ಡ್ ಏಳು ಎಸೆತಗಳಲ್ಲಿ 13 ರನ್ ಸಿಡಿಸಿದ್ರು. ಪರಿಣಾಮ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು.
ಸವಾಲನ್ನು ಬೆನ್ನಟ್ಟಿದ್ದ ಕೆಕೆಆರ್ ತಂಡ 25 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಶುಬ್ಮನ್ ಗಿಲ್ ಏಳು ರನ್ ಗೆ ಸೀಮಿತವಾದ್ರೆ, ಸುನೀಲ್ ನರೇನ್ 9 ರನ್ ಗೆ ಹೋರಾಟ ಮುಗಿಸಿದ್ರು. ನಂತರ ನಾಯಕ ದಿನೇಶ್ ಕಾರ್ತಿಕ್ ದಿಟ್ಟ ಹೋರಾಟ ನೀಡಿದ್ರೂ 30 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು.
ಇನ್ನು ನಿತಿಶ್ ರಾಣಾ 24 ರನ್, ಇಯಾನ್ ಮೊರ್ಗಾನ್ 16, ಆಂಡ್ರೆ ರಸೇಲ್ 11 ಹಾಗೂ ನಿಖಿಲ್ ನಾಯ್ಕ್ 1 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡ್ರು. ಇನ್ನೊಂದೆಡೆ ಪ್ಯಾಟ್ ಕಮಿನ್ಸ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ರು. 12 ಎಸೆತಗಳಲ್ಲಿ ಒಂದು ಬೌಂಡ್ರಿ ಮತ್ತು ನಾಲ್ಕು ಸಿಕ್ಸರ್ ಗಳ ಸಹಾಯದಿಂದ 33 ರನ್ ದಾಖಲಿಸಿ ಪ್ಯಾಟಿನ್ಸನ್ ಗೆ ವಿಕೆಟ್ ಒಪ್ಪಿಸಿದ್ರು. ಅಂತಿಮವಾಗಿ ಕೆಕೆಆರ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 146 ರನ್ ದಾಖಲಿಸಿತ್ತು. ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾಗೆ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದು ಬಂತು.








