ಹಿಟ್ ಮ್ಯಾನ್ ರೋಹಿತ್ ಹೆಸರಿಗೆ ಸೇರಿಕೊಂಡಿದೆ 200 ಸಿಕ್ಸರ್ ಗಳು…!
ರೋಹಿತ್ ಶರ್ಮಾ.. ಹಿಟ್ ಮ್ಯಾನ್ ಅಂತನೇ ಫೇಮಸ್. ಆದ್ರೆ ರೋಹಿತ್ ಮುಖದಲ್ಲಿ ಎಂದೂ ಕೂಡ ಆಕ್ರಮಣಕಾರಿ ಪ್ರವೃತ್ತಿಯಾಗಲಿ, ಸಿಟ್ಟಾಗಲಿ, ತೀಕ್ಞ್ಣ ನೋಟವಾಗಲಿ ಇರಲ್ಲ. ತಾಳ್ಮೆಯಿಂದಲೇ ಬ್ಯಾಟ್ ಬೀಸುವ ರೋಹಿತ್ ಸೋಂಬೇರಿ ಥರಾ ಕಾಣುತ್ತಾರೆ. ಆದ್ರೆ ರೋಹಿತ್ ಬತ್ತಳಿಕೆಯಲ್ಲಿರುವ ಪ್ರತಿಯೊಂದು ಹೊಡೆತಗಳು ಕೂಡ ಭಿನ್ನ ವಿಭಿನ್ನವಾಗಿರುತ್ತದೆ.
ಅದು ಟೆಸ್ಟ್ ಪಂದ್ಯವಾಗಿರಲಿ, ಏಕದಿನ ಪಂದ್ಯವಾಗಿರಲಿ.. ಚುಟುಕು ಕ್ರಿಕೆಟ್ ಆಗಿರಲಿ.. ರೋಹಿತ್ ಆಟದಲ್ಲಿ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಆಡುವ ರೋಹಿತ್ ಆಟವನ್ನು ನೋಡುವುದೇ ಚೆಂಡ. ಅದ್ಭುತ ಹೊಡೆತಗಳ ಮೂಲಕವೇ ಗಮನ ಸೆಳೆಯುವ ರೋಹಿತ್ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ.
ಹೌದು, ಐಪಿಎಲ್ ನಲ್ಲಿ 200 ಸಿಕ್ಸರ್ ಗಳನ್ನು ಸಿಡಿಸಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೆಕೆಆರ್ ವಿರುದ್ಧ ಆರು ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲ ಐಪಿಎಲ್ ನಲ್ಲಿ ಈ ಸಾಧನೆ ಮಾಡಿದ ಎರಡನೇ ಭಾರತೀಯ ಕ್ರಿಕೆಟಿಗ ಹಾಗೂ ಗರಿಷ್ಠ ಸಿಕ್ಸರ್ ಸಿಡಿಸಿದ್ದ ಪಟ್ಟಿಯಲ್ಲಿ ರೋಹಿತ್ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಇನ್ನು ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ್ದ ದಾಖಲೆಯ ಮೊದಲ ಸ್ಥಾನದಲ್ಲಿ ಕ್ರಿಸ್ ಗೇಲ್ ಹೆಸರಿದೆ. ಕ್ರಿಸ್ ಗೇಲ್ 326 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಹಾಗೇ ಎಬಿಡಿ ವಿಲಿಯರ್ಸ್ 214 ಸಿಕ್ಸರ್ ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ರೆ, ಮಹೇಂದ್ರ ಸಿಂಗ್ ಧೋನಿ 212 ಸಿಕ್ಸರ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನ ಸದ್ಯ ರೋಹಿತ್ ಹೆಸರಿನಲ್ಲಿದೆ. ಅದೇ ರೀತಿ 194 ಸಿಕ್ಸರ್ ಗಳನ್ನು ಸಿಡಿಸಿ ಐದನೇ ಸ್ಥಾನದಲ್ಲಿರುವ ಸುರೇಶ್ ರೈನಾ ಈ ಬಾರಿಯ ಐಪಿಎಲ್ ನಲ್ಲಿ ಆಡುತ್ತಿಲ್ಲ.








