ಎಂಥಾ ಸಾವ್ ಮಾರಾಯ…! ಏನ್ ಗುರು.. ಹಿಂಗಾಡ್ತಾರೋ..! ಬಿಡೋ.. ಈ ಬಾರಿಯೂ ಕಪ್ ನಮ್ದಲ್ಲ…!
ಈ ಬಾರಿಯೂ ಕಪ್ ನಮ್ದಲ್ಲ..! 2020ಯಲ್ಲೂ ಆರ್ ಸಿಬಿಯ ಹಣೆ ಬರೆಹ ಬದಲಾಗಿಲ್ಲ. ಪ್ಲೇ ಆಫ್ ನಲ್ಲಿ ಡೇವಿಡ್ ವಾರ್ನರ್ ಬಳಗ ವಿರಾಟ್ ಪಡೆಯನ್ನು ಗೆಲ್ಲಲು ಬಿಡಲಿಲ್ಲ. ಆದ್ರೂ ಆರ್ ಸಿಬಿ ಅಭಿಮಾನಿಗಳ ಅಭಿಮಾನ ಕಮ್ಮಿಯಾಗಿಲ್ಲ. ಮುಂದಿನ ಸಲ ಕಪ್ ನಮ್ದೆ ಅಂತ ಹೇಳುವ ಪರಿಪಾಠ ಮುಗಿಯುವುದಿಲ್ಲ.
ಅಂದ ಹಾಗೇ ಆರ್ ಸಿಬಿ ಎಡವಿದ್ದು ಎಲ್ಲಿ..?
ನಡೆಯಲಿಲ್ಲ ವಿರಾಟ್ ಕೊಹ್ಲಿಯ ಯುಕ್ತಿ. ಸಾಕಾಗಲಿಲ್ಲ ಎಬಿಡಿಯ ಶಕ್ತಿ. ಸಾಲು ಸಾಲು ಸೋಲುಗಳಿಂದ ತಂಡಕ್ಕೆ ಒಲಿಯಲಿಲ್ಲ ಗೆಲುವಿನ ಸ್ಪೂರ್ತಿ. ಕಳಪೆ ಆಟದಿಂದ ಮಂಕಾಗಿ ಹೋಗುತ್ತಿದೆ ಆರ್ಸಿಬಿಯ ಕೀರ್ತಿ. ಹಾಗಂತ ತಂಡದ ಪ್ರದರ್ಶನದಿಂದ ನಿರಾಸೆ ಅನುಭವಿಸಿದ್ರೂ ಕಡಿಮೆಯಾಗಲಿಲ್ಲ ಅಭಿಮಾನಿಗಳ ಪ್ರೀತಿ. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಅಭಿಮಾನಿಗಳು ಇಟ್ಟಿರುವ ಭಕ್ತಿ..!
ಹೌದು, ಕಳೆದ 13 ವರ್ಷಗಳಿಂದ ಆರ್ ಸಿಗೆ ಐಪಿಎಲ್ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಪ್ರತಿ ಬಾರಿಯೂ ಕಪ್ ನಮ್ದೆ ಅಂತ ಬೀಗುತ್ತಿರುವ ಅಭಿಮಾನಿಗಳಿಗೆ ವಿರಾಟ್ ಬಳಗ ನಿರಾಸೆ ಮೂಡಿಸುತ್ತನೇ ಇದೆ.
ಹಾಗಿದ್ರೆ ವಿರಾಟ್ ಕೊಹ್ಲಿ ಪಡೆ ಕಪ್ ಗೆಲ್ಲಲು ಯಾಕೆ ಸಾಧ್ಯವಾಗುತ್ತಿಲ್ಲ ? ಈ ಪ್ರಶ್ನೆಗೆ ನಿಖರವಾದ ಉತ್ತರವಿಲ್ಲ. ಬದಲಾಗಿ ಪ್ರಶ್ನೆಗೆ ಮರು ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.
ಮುಖ್ಯವಾಗಿ ಟೀಮ್ ಮ್ಯಾನೇಜ್ಮೆಂಟ್. ತಂಡದ ಆಯ್ಕೆಯ ವಿಚಾರದಲ್ಲಿ ಸತತವಾಗಿ ಎಡವುತ್ತಿದೆ. ಬಲಿಷ್ಠ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಆರ್ ಸಿಬಿ ಮ್ಯಾನೇಜ್ ಮೆಂಟ್ಗೆ ಸಾಧ್ಯವಾಗುತ್ತಿಲ್ಲ.
ಅಲ್ಲದೆ ಆರ್ ಸಿಬಿ ತಂಡ ಹೆಚ್ಚು ಅವಲಂಬಿತವಾಗಿರೋದು ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಮೇಲೆ. ಇನ್ನುಳಿದ ಆಟಗಾರರು ಹೆಸರಿಗೆ ತಕ್ಕಂತೆ ಆಡುತ್ತಿಲ್ಲ. ಪ್ರತಿ ಪಂದ್ಯದಲ್ಲೂ ವಿರಾಟ್ ಮತ್ತು ಎಬಿಡಿ ಆಡಲೇ ಬೇಕು. ಒಂದು ವೇಳೆ ಆಡದಿದ್ರೆ ಆರ್ ಸಿಬಿಗೆ ಸೋಲು ಕಟ್ಟಿಟ್ಟ ಬುತ್ತಿ.
ಈ ಬಾರಿ ದೇವದತ್ತ್ ಪಡಿಕ್ಕಲ್ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ. ಅದನ್ನು ಬಿಟ್ಟು ಆರ್ ಸಿಬಿಯ ಯಾವೊಬ್ಬ ಬ್ಯಾಟ್ಸ್ ಮೆನ್ ಕೂಡ ತಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಆಟ ಆಡಲಿಲ್ಲ.
ರನ್ ಮೇಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಮರುಭೂಮಿಯ ಅಂಗಣದಲ್ಲಿ ಸ್ಟಕ್ ಆಗಿಬಿಟ್ರು. ಆರೋನ್ ಫಿಂಚ್ ಮತ್ತು ಎಬಿಡಿಗೆ ಧೂಳು ಎಬ್ಬಿಸಲು ಸಾಧ್ಯವಾಗಲೇ ಇಲ್ಲ.
ಇನ್ನು ಬೌಲಿಂಗ್ ವಿಭಾಗ. ಕ್ರಿಸ್ ಮೋರಿಸ್ ಗಾಯ, ಮಹಮ್ಮದ್ ಸಿರಾಜ್ ಮತ್ತು ನವದೀಪ್ ಸೈನಿ ಸ್ಥಿರ ಪ್ರದರ್ಶನ ನೀಡಲಿಲ್ಲ. ಚಾಹಲ್ ಜಾದೂ ಹೆಚ್ಚು ವರ್ಕೌಟ್ ಆಗಲಿಲ್ಲ.
ತಂಡದಲ್ಲಿ ಹೆಚ್ಚು ಆಲ್ ರೌಂಡರ್ ಗಳಿದ್ರೂ ಮ್ಯಾಚ್ ಫೀನಿಶರ್ಗಳ ಕೊರತೆ ಎದ್ದು ಕಾಣುತ್ತಿತ್ತು.
ಹೀಗಾಗಿ ತಂಡದಿಂದ ಸಾಂಘಿಕ ಆಟ ಹೊರಬಂದಿಲ್ಲ. ತಂಡ ಬ್ಯಾಲೆನ್ಸ್ ಆಗಿಲ್ಲ. ಆಟಗಾರರ ಆಯ್ಕೆ ವಿಚಾರದಲ್ಲಂತೂ ಆರ್ ಸಿಬಿ ಟೀಮ್ ಮ್ಯಾನೇಜ್ ಮೆಂಟ್ ಪಕ್ಕಾ ಎಡವಿದೆ. ದುಡ್ಡು ಇದ್ರೂ ಆಟಗಾರರನ್ನು ಖರೀದಿ ಮಾಡುವಾಗ ಆರ್ ಸಿಬಿ ಮ್ಯಾನೇಜ್ ಮೆಂಟ್ ನ ಲೆಕ್ಕಚಾರ ಏನು ಅಂತನೇ ಗೊತ್ತಾಗುತ್ತಿಲ್ಲ.
ಇನ್ನು ಕರ್ನಾಟಕದ ಆಟಗಾರರನ್ನು ಕಡೆಗಣಿಸಿರುವುದು ಆರ್ ಸಿಬಿಗೆ ದೊಡ್ಡ ಹೊಡೆತ ಕೊಟ್ಟಿದೆ. ಸ್ಥಳೀಯ ಆಟಗಾರರ ಪ್ರತಿಭೆಗಳ ಮೇಲೆ ನಂಬಿಕೆಯನ್ನಿಟ್ಟುಕೊಳ್ಳದಿರುವುದು ಆರ್ ಸಿಬಿಯ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ.
ಹಾಗೇ ನೋಡಿದ್ರೆ ಆರ್ ಸಿಬಿ ತಂಡವನ್ನು ನೋಡಿದಾಗ ಯಾರು ಕೂಡ ಪ್ಲೇ ಆಫ್ ಗೆ ಎಂಟ್ರಿಯಾಗುತ್ತೆ ಅಂತ ಅಂದುಕೊಂಡಿರಲಿಲ್ಲ. ಆರ್ ಸಿಬಿ ಅಭಿಮಾನಿಗಳು ಅಭಿಮಾನದಿಂದ ವಿರಾಟ್ ಪಡೆಯ ಮೇಲೆ ವಿಶ್ವಾಸವನ್ನಿಟ್ಟುಕೊಂಡಿದ್ದರು.
ಸತತ ನಾಲ್ಕು ಪಂದ್ಯಗಳ ಸೋಲಿನ ನಡುವೆಯೂ ಪ್ಲೇ ಆಫ್ ಗೆ ಎಂಟ್ರಿಯಾಗಿದ್ದು ಪವಾಡವೇ ಸರಿ.
ಆದ್ರೆ ಅದೃಷ್ಟವನ್ನು ಗೆಲುವಾಗಿ ಪರಿವರ್ತಿಸಲು ನಾಯಕ ವಿರಾಟ್ ಕೊಹ್ಲಿ ಎಡವಿದ್ರು. ಏಕಾಂಗಿಯಾಗಿ ಹೋರಾಟ ನಡೆಸುತ್ತಿದ್ದ ವಿರಾಟ್ ಈ ಬಾರಿಯ ಐಪಿಎಲ್ ನಲ್ಲಿ ವೈಫಲ್ಯ ಅನುಭವಿಸಿರೋದು ಆರ್ ಸಿಬಿಗೆ ದೊಡ್ಡ ಹೊಡೆತ.
ಅದೇನೇ ಇರಲಿ, ಈಗ ಆತ್ಮಾವಲೋಕನ ಸಮಯ. ಆರ್ ಸಿಬಿಯಲ್ಲಿ ಸಾಕಷ್ಟು ಬದಲಾವಣೆಯಾಗಬೇಕಿದೆ. ಮುಖ್ಯವಾಗಿ ಟೀಮ್ ಮ್ಯಾನೇಜ್ ಮೆಂಟ್ ನಲ್ಲಿ ಮೇಜರ್ ಸರ್ಜರಿಯಾಗಬೇಕಿದೆ.
ಇಲ್ಲಿ ಆಟಗಾರರನ್ನು ದೂರಿ ಪ್ರಯೋಜನವಿಲ್ಲ. ಪ್ರತಿಯೊಬ್ಬ ಆಟಗಾರನೂ ಗೆಲುವಿಗಾಗಿ ಹೋರಾಟ ನಡೆಸುತ್ತಾನೆ. ಆದ್ರೆ ಆಟಗಾರರನ್ನು ಆಯ್ಕೆ ಮಾಡುವಾಗ ಟೀಮ್ ಮ್ಯಾನೇಜ್ ಮೆಂಟ್ ಯೋಚನೆ, ಯೋಜನೆ ಹಾಕೊಂಡು ಆಟಗಾರರನ್ನು ಖರೀದಿ ಮಾಡಬೇಕು. ಆದ್ರೆ ಆರ್ ಸಿಬಿಯ ಟೀಮ್ ಮ್ಯಾನೇಜ್ ಮೆಂಟ್ನ ಲೆಕ್ಕಚಾರ ಏನು ಅಂತನೇ ಗೊತ್ತಾಗುತ್ತಿಲ್ಲ.
ಒಟ್ಟಿನಲ್ಲಿ ಆರ್ ಸಿಬಿ ಸೋತಿದೆ. ಹಾಗಂತ ಸೋತಿರುವುದಕ್ಕೆ ಬೇಸರವಿಲ್ಲ. ಕೆಟ್ಟ ಆಟವನ್ನಾಡಿರುವುದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ.
ಏನೇ ಆದ್ರೂ ಈ ಬಾರಿ ಕಪ್ ನಮ್ದಲ್ಲ. ಮುಂದಿನ ಬಾರಿಯಾದ್ರೂ ಕಪ್ ನಮ್ದೆ ಆಗಿರಲಿ. ಅದಕ್ಕೆ ತಕ್ಕಂತೆ ಆರ್ ಸಿಬಿ ತಂಡವನ್ನು ಕಟ್ಟಲಿ. ಇಲ್ಲದೆ ಇದ್ರೆ ಪ್ರತಿ ವರ್ಷ, ಈ ಬಾರಿ ಕಪ್ ನಮ್ದೆ ಅನ್ನುತ್ತಿದ್ದ ಅಭಿಮಾನಿಗಳು ಈ ಬಾರಿಯೂ ಕಪ್ ನಮ್ದಲ್ಲ ಅಂತ ಹೇಳಲೂ ಬಹುದು..