ಸಿಎಸ್ ಕೆ ಗೆಲುವಿನ ಆಸೆಯನ್ನು ಭಗ್ನಗೊಳಿಸಿದ್ದ ಜೋಫ್ರಾ ಆರ್ಚರ್ ನ ಆ ನಾಲ್ಕು ಸಿಕ್ಸರ್ ಗಳು…!
ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಟೂರ್ನಿಯ ಎರಡನೇ ಪಂದ್ಯದಲ್ಲಿ 16 ರನ್ ಗಳಿಂದ ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧ ಸೋಲು ಅನುಭವಿಸಿದೆ. ಸಂಜು ಸಾಮ್ಸನ್, ಸ್ಟೀವನ್ ಸ್ಮಿತ್ ಮತ್ತು ಜೋಫ್ರಾ ಆರ್ಚರ್ ಅವರ ಸಿಕ್ಸರ್ ಭರಾಟೆಯ ಮುಂದೆ ಸಿಎಸ್‍ಕೆ ತಂಡದ ಲೆಕ್ಕಚಾರಗಳೆಲ್ಲಾ ಬುಡಮೇಲು ಆಗೋಯ್ತು.
ಟಾಸ್ ಗೆದ್ದು ಮೊದಲು ರಾಜಸ್ತಾನ ರಾಯಲ್ಸ್ ತಂಡವನ್ನು ಸಿಎಸ್‍ಕೆ ತಂಡ ಬ್ಯಾಟಿಂಗ್ ಗೆ ಆಹ್ವಾನ ನೀಡಿತ್ತು. ಆರಂಭದಲ್ಲೇ ರಾಯಲ್ಸ್ ತಂಡ ಆಘಾತ ಅನುಭವಿಸಿತ್ತು. ಯುವ ಆರಂಭಿಕ ಆಟಗಾರ ಜೈಸ್ವಾಲ್ ಅವರು 6 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು.
ನಂತರ ನಾಯಕ ಸ್ಟೀವನ್ ಸ್ಮಿತ್ ಜೊತೆ ಸೇರಿಕೊಂಡ ಸಂಜು ಸಾಮ್ಸನ್ ಅವರು ಎರಡನೇ ವಿಕೆಟ್‍ಗೆ 121ರನ್‍ಗಳನ್ನು ಕಲೆ ಹಾಕಿ ರಾಯಲ್ಸ್ ತಂಡದ ಬೃಹತ್ ಮೊತ್ತಕ್ಕೆ ಅಡಿಪಾಯ ಹಾಕಿಕೊಟ್ಟರು. ಆಕ್ರಮಣಕಾರಿ ಆಟವನ್ನಾಡಿದ್ದ ಸಂಜು ಸಾಮ್ಸನ್ ಅವರು 32 ಎಸೆತಗಳಲ್ಲಿ 9 ಸಿಕ್ಸರ್ ಮತ್ತು ಒಂದು ಬೌಂಡರಿಯ ನೆರವಿನಿಂದ ಆಕರ್ಷಕ 74 ರನ್ ಸಿಡಿಸಿ ತನ್ನ ಹೋರಾಟವನ್ನು ಮುಗಿಸಿದ್ರು.
ಇನ್ನೊಂದೆಡೆ ಸ್ಟೀವನ್ ಸ್ಮಿತ್ ಅವರು ನಾಯಕನ ಜವಾಬ್ದಾರಿಯನ್ನು ಅರಿತುಕೊಂಡು ಬ್ಯಾಟ್ ಬೀಸಿ ಅರ್ಧಶತಕ ಕೂಡ ದಾಖಲಿಸಿದ್ರು. ಸಾಮ್ಸನ್ ಅವರ ವಿಕೆಟ್ ಪತನಗೊಳ್ಳುತ್ತಿದ್ದಂತೆ ಸಿಎಸ್‍ಕೆ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿಕೊಂಡಿತ್ತು. ಡೇವಿಡ್ ಮಿಲ್ಲರ್ ಶೂನ್ಯ ಸುತ್ತಿದ್ರೆ, ರಾಬಿನ್ ಉತ್ತಪ್ಪ ಐದು ರನ್ ಗೆ ಸೀಮಿತವಾದ್ರು. ಹಾಗೇ ರಾಹುಲ್ ಟೆವಾಟಿಯಾ 10 ರನ್, ರಿಯಾನ್ ಪರಾಗ್ 6 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದಿದ್ರು.
ಇನ್ನೊಂದೆಡೆ ಸಿಎಸ್‍ಕೆ ಬೌಲರ್ ಗಳಿಗೆ ಸವಾಲಾಗಿ ನಿಂತಿದ್ದ ಸ್ಟೀವನ್ ಸ್ಮಿತ್ 47 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳ ಸಹಾಯದಿಂದ ಮನಮೋಹಕ 69 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡ್ರು.
ಆಗ ಸಿಎಸ್‍ಕೆ ತಂಡದ ಮೊತ್ತ 18.2 ಓವರ್ ಗಳಲ್ಲಿ 7 ವಿಕೆಟ್‍ಗೆ 178 ರನ್ ಆಗಿತ್ತು. ಈ ಹಂತದಲ್ಲಿ ಸಿಎಸ್‍ಕೆ ತಂಡವನ್ನು ಚಡಪಡಿಸುವಂತೆ ಮಾಡಿದ್ದು ಜೋಫ್ರಾ ಆರ್ಚರ್. ಲುಂಗಿ ಎನ್‍ಗಿಡಿ ಅವರನ್ನು ಗಲಿಬಿಲಿಗೊಳಿಸಿದ್ದ ಜೋಫ್ರಾ ಆರ್ಚರ್ ಅವರು ಸತತ ನಾಲ್ಕು ಸಿಕ್ಸರ್ ಗಳನ್ನು ಸಿಡಿಸಿ ಪಂದ್ಯದ ಗತಿಯನ್ನೇ ಬದಲಾಯಿಸಿಬಿಟ್ಟರು. ಎಂಟು ಎಸೆತಗಳಲ್ಲಿ ಅಜೇಯ 27 ರನ್ ಗಳಿಸಿದ್ದ ಜೋಫ್ರಾ ಆರ್ಚರ್ ಅವರು ಸಿಎಸ್‍ಕೆ ತಂಡದ ಕೈಯಿಂದ ಗೆಲುವನ್ನು ಕಸಿದುಕೊಂಡಿದ್ದರು. ಅಂತಿಮವಾಗಿ ರಾಜಸ್ತಾನ ರಾಯಲ್ಸ್ ತಂಡ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿತ್ತು. ಸ್ಯಾಮ್ ಕುರನ್ ಅಜೇಯ 10 ರನ್ ಗಳಿಸಿದ್ರು.
ಕಠಿಣ ಸವಾಲನ್ನು ಬೆನ್ನಟ್ಟಿದ್ದ ಸಿಎಸ್‍ಕೆ ತಂಡ ಕೂಡ ದಿಟ್ಟ ಹೋರಾಟವನ್ನೇ ನೀಡಿತ್ತು. ಆರಂಭಿಕರಾದ ಮುರಳಿ ವಿಜಯ್ (21) ಮತ್ತು ಶೇನ್ ವಾಟ್ಸನ್ (33) ಉತ್ತಮ ಆರಂಭವನ್ನೇ ನೀಡಿದ್ರು. ಆದ್ರೆ ಶೇನ್ ವಾಟ್ಸನ್ ಅವರನ್ನು ರಾಹುಲ್ ಟೆವಾಟಿಯಾ ಬಲಿ ಪಡೆದುಕೊಂಡ್ರೆ, ಮುರಳಿ ವಿಜಯ್ ಟಾಮ್ ಕುರನ್‍ಗೆ ವಿಕೆಟ್ ಒಪ್ಪಿಸಿದ್ರು.
ಬಳಿಕ ಡು ಪ್ಲೇಸಸ್ ಅವರು ಆಕ್ರಮಣಕಾರಿ ಆಟವನ್ನಾಡಿ ರಾಯಲ್ಸ್ ಬೌಲರ್ ಗಳಿಗೆ ತಲೆನೋವಾಗಿ ಪರಿಣಮಿಸಿದ್ರು. ಇನ್ನೊಂದೆಡೆ ಸ್ಯಾಮ್ ಕುರನ್ 17 ರನ್ ಗೆ ಔಟಾದ್ರೆ, ಂiರುತುರಾಜ್ ಗಾಯಕ್ವಾಡ್ ಶೂನ್ಯ ಸುತ್ತಿದ್ರು. ಬಳಿಕ ಕೇದಾರ್ ಜಾಧವ್ ಡುಪ್ಲೇಸಸ್ ಸಾಥ್ ನೀಡಿದ್ರೂ 22 ರನ್‍ಗೆ ಸೀಮಿತವಾದ್ರು. ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಧೋನಿ ಕೊನೆಯ ತನಕ ಗೆಲುವಿಗಾಗಿ ಹೋರಾಟ ನಡೆಸಿದ್ರೂ ಪ್ರಯೋಜನವಾಗಲಿಲ್ಲ. ಡುಪ್ಲೇಸಸ್ ಅವರು 37 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಏಳು ಸಿಕ್ಸರ್ ಗಳ ನೆರವಿನಿಂದ 72 ರನ್ ಗಳಿಸಿದ್ರು.
ಕೊನೆಯ ಓವರ್ ನಲ್ಲಿ ಸಿಎಸ್‍ಕೆ ತಂಡಕ್ಕೆ ಗೆಲ್ಲಲು ಅಸಾಧ್ಯವಾದ 38 ರನ್‍ಗಳು ಬೇಕಿದ್ದವು. ಆದ್ರೂ ಧೋನಿ ಕ್ರೀಸ್ ನಲ್ಲಿ ಇರುವುದರಿಂದ ಸಿಎಸ್‍ಕೆ ಅಭಿಮಾನಿಗಳಿಗೆ ಗೆಲ್ಲುವ ದುರಾಸೆ ಇತ್ತು. ಮೊದಲ ಎರಡು ಎಸೆತಗಳಲ್ಲಿ ತಲಾ ಒಂದು ರನ್ ಗಳು ಬಂದವು. ಆದ್ರೆ ಮೂರು, ನಾಲ್ಕು, ಐದನೇ ಎಸೆತಗಳಲ್ಲಿ ಧೋನಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ್ರು. ಅಂತಿಮವಾಗಿ ಸಿಎಸ್‍ಕೆ ತಂಡ ಆರು ವಿಕೆಟ್‍ಗೆ 200 ರನ್ ಗಳಿಸಿ 16 ರನ್ ಗಳಿಂದ ಸೋಲು ಒಪ್ಪಿಕೊಂಡಿತ್ತು. ಧೋನಿ ಅಜೇಯ 29 ರನ್ ಗಳಿಸಿದ್ರು. ರಾಯಲ್ಸ್ ಪರ ರಾಹುಲ್ ಟೆವಾಟಿಯಾ 37ಕ್ಕೆ ಮೂರು ವಿಕೆಟ್‍ಗಳನ್ನು ಉರುಳಿಸಿದ್ರು. ಆಕ್ರಮಣಕಾರಿ ಆಟವನ್ನಾಡಿದ್ದ ಸಂಜು ಸಾಮ್ಸನ್ ಅವರು ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.