ಐಪಿಎಲ್ ಟೂರ್ನಿಯನ್ನು ಅಡೆತಡೆ ಇಲ್ಲದೆ ಸಂಘಟಿಸುವುದೇ ಮುಖ್ಯ ಗುರಿ – ಸೌರವ್ ಗಂಗೂಲಿ
2020ರ ಯುಎಇ ಐಪಿಎಲ್ ಟೂರ್ನಿಗೆ ಕೋವಿಡ್ ಸೋಂಕಿನ ಆತಂಕ ಎದುರಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಒಟ್ಟು 13 ಮಂದಿ ಕೋವಿಡ್ ಸೋಂಕಿಗೆ ಒಳಪಟ್ಟಿದ್ದಾರೆ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇನ್ನೂ ಕ್ವಾರಂಟೈನ್ ನಲ್ಲಿದೆ. ಹಾಗೇ ಸಿಎಸ್‍ಕೆ ತಂಡದ ಸ್ಟಾರ್ ಆಟಗಾರ ಸುರೇಶ್ ರೈನಾ ವೈಯಕ್ತಿಕ ಕಾರಣ ನೀಡಿ ಟೂರ್ನಿಯಿಂದ ಹೊರಬಂದಿದ್ದಾರೆ. ಸದ್ಯ ಅವರು ದೆಹಲಿಯಲ್ಲಿದ್ದು ಕ್ವಾರಂಟೈನ್ ನಲ್ಲಿದ್ದಾರೆ.
ಈ ನಡುವೆ ಬಿಸಿಸಿಐ ಬಾಸ್ ಸೌರವ್ ಗಂಗೂಲಿ 2020ರ ಯುಎಇ ಐಪಿಎಲ್ ಟೂರ್ನಿಯ ಬಗ್ಗೆ ಮಾತನಾಡಿದ್ದಾರೆ. ಐಪಿಎಲ್ ಟೂರ್ನಿಯನ್ನು ಯಾವುದೇ ಅಡೆತಡೆ ಇಲ್ಲದೆ ಆಯೋಜನೆ ಮಾಡುವುದೇ ನಮ್ಮ ಮುಖ್ಯ ಗುರಿ ಎಂದು ಹೇಳಿದ್ದಾರೆ.
ಸಿಎಸ್‍ಕೆ ತಂಡದ ಬಗ್ಗೆ ಈಗ ಏನು ಹೇಳಲು ಸಾಧ್ಯವಿಲ್ಲ. ಈ ಹಿಂದೆ ನಿಗದಿ ಪಡಿಸಿದ್ದ ವೇಳಾಪಟ್ಟಿಗೆ ಸರಿಯಾಗಿ ಸಿಎಸ್‍ಕೆ ತಂಡ ರೆಡಿಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು. ಐಪಿಎಲ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜನೆ ಮಾಡುವುದು ನಮ್ಮ ಗುರಿ ಎಂದು ಗಂಗೂಲಿ ಹೇಳಿದ್ದಾರೆ.
ವಿಶ್ವದ ಜನ ಇವತ್ತು ಕೋವಿಡ್ 19 ಸೋಂಕಿನ ವಿರುದ್ಧ ಹೋರಾಡುತ್ತಿದೆ. ಈಗಾಗಲೇ ಕ್ರಿಕೆಟ್ ಮತ್ತು ಫುಟ್ ಬಾಲ್ ಟೂರ್ನಿಗಳನ್ನು ಪ್ರೇಕ್ಷಕರಿಲ್ಲದೆ ಆಯೋಜನೆ ಮಾಡಲಾಗುತ್ತಿದೆ. ವಾಸ್ತವ ಪರಿಸ್ಥಿತಿಯನ್ನು ನಾವು ಅರಿತುಕೊಳ್ಳಬೇಕು. ಅದಕ್ಕೆ ತಕ್ಕಂತೆ ನಾವು ಮುಂದುವರಿಯಬೇಕು ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ಟೂರ್ನಿಯು ಯುಎಇನ ಮೂರು ಮೈದಾನಗಳಲ್ಲಿ ನಡೆಯಲಿದೆ. ಟೂರ್ನಿಯ ಎಂಟು ತಂಡಗಳು ಯುಎಇನಲ್ಲಿದ್ದು ಕೋವಿಡ್ ಮಾರ್ಗಸೂಚಿ, ಶಿಷ್ಟಚಾರ ಹಾಗೂ ಬಿಸಿಸಿಐನ ಎಸ್‍ಒಪಿ ಪ್ರಕಾರ ಅಭ್ಯಾಸ ನಡೆಸುತ್ತಿದೆ. ಆಟಗಾರರ, ಸಿಬ್ಬಂದಿಗಳು ಮತ್ತು ಪದಾಧಿಕಾರಿಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಅಂದ ಹಾಗೇ ಈ ಟೂರ್ನಿಯು ಜೈವಿಕ ಸುರಕ್ಷತೆಯೊಂದಿಗೆ ನಡೆಯುತ್ತಿದೆ.








