ಐಪಿಎಲ್ 2020- ಸನ್ ರೈಸರ್ಸ್ ಮುಂದೆ ಮಂಕಾದ ಧೋನಿ ಬಳಗ.. ಸಿಎಸ್ ಕೆ ತಂಡಕ್ಕೆ ಹ್ಯಾಟ್ರಿಕ್ ಸೋಲು..

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಬಾರಿ ಯಾಕೋ ಅದೃಷ್ಟ ಕೈಕೊಟ್ಟಿದೆ. ಐಪಿಎಲ್ ಟೂರ್ನಿಯ 14ನೇ ಪಂದ್ಯದಲ್ಲಿ ಧೋನಿ ಪಡೆ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಸನ್ ರೈಸರ್ಸ್ ಹೈದ್ರಬಾದ್ ತಂಡದ ವಿರುದ್ಧ ಏಳು ರನ್ ಗಳಿಂದ ಸಿಎಸ್ ಕೆ ತಂಡ ಪರಾಭವಗೊಂಡಿದೆ. ಕೊನೆಯ ಓವರ್ ಗಳಲ್ಲಿ ನಾಯಕ ಹಾಗೂ ಮ್ಯಾಚ್ ವಿನ್ನರ್ ಧೋನಿ ಕ್ರೀಸ್ ನಲ್ಲಿದ್ರೂ ತಂಡಕ್ಕೆ ಗೆಲುವು ದಕ್ಕಲಿಲ್ಲ.
ಟಾಸ್ ಗೆದ್ದ ಸನ್ ರೈಸರ್ಸ್ ಹೈದ್ರಬಾದ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ಶಿಸ್ತು ಬದ್ಧ ಬೌಲಿಂಗ್ ದಾಳಿ ನಡೆಸಿದ್ದ ಸಿಎಸ್ ಕೆ ಬೌಲರ್ ಗಳು ವಾರ್ನರ್ ಬಳಗದ ಬ್ಯಾಟ್ಸ್ ಮೆನ್ ಗಳನ್ನು ಕಟ್ಟಿ ಹಾಕಲು ಯಶಸ್ವಿಯಾಗಿದ್ದರು. ಸ್ಫೋಟಕ ಬ್ಯಾಟ್ಸ್ ಮೆನ್ ಜೋನಿ ಬೇರ್ ಸ್ಟೋ ಶೂನ್ಯ ಸುತ್ತಿದ್ರು. ಹಾಗೇ ಮನೀಶ್ ಪಾಂಡೆ 21 ಎಸೆತಗಳಲ್ಲಿ ಐದು ಬೌಂಡರಿಗಳ ಸಹಾಯದಿಂದ 29 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು. ಬಳಿಕ ಡೇವಿಡ್ ವಾರ್ನರ್ ಕೂಡ 28 ರನ್ ಗೆ ಸುಸ್ತಾದ್ರು. ಮಧ್ಯಮ ಕ್ರಮಾಂಕದ ಆಧಾರವಾಗಿದ್ದ ಕೇನ್ ವಿಲಿಯಮ್ಸ್ 9 ರನ್‍ಗೆ ಸೀಮಿತವಾದ್ರು.
ಈ ಹಂತದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಸಿಎಸ್‍ಕೆ ತಂಡದ ಲೆಕ್ಕಚಾರಗಳನ್ನು ಬುಡಮೇಲು ಮಾಡಿದ್ದು ಪ್ರಿಯಮ್ ಗರ್ಗ್. 26 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಸಿಕ್ಸರ್ ನ ಸಹಾಯದಿಂದ ಆಕರ್ಷಕ 51 ರನ್ ದಾಖಲಿಸಿದ್ರು. ಹಾಗೇ ಅಭಿಷೇಕ್ ಶರ್ಮಾ 24 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿ ಆಕರ್ಷಕ 31 ರನ್ ಗಳಿಸಿದ್ರು. ಇನ್ನು ಅಬ್ದುಲ್ ಸಮಾದ್ ಅಜೇಯ 8 ರನ್ ಸಿಡಿಸಿದ್ರು. ಅಂತಿಮವಾಗಿ ಸನ್ ರೈಸರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ದಾಖಲಿಸಿತು.
ಗೆಲ್ಲಲು 165 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಲ್ಲೇ ಪಂದ್ಯದ ಮೇಲೆ ಪ್ರಾಬಲ್ಯ ಸಾಧಿಸಲು ವಿಫಲವಾಯ್ತು. ಶೇನ್ ವಾಟ್ಸನ್ ಒಂದು ರನ್ ಗಳಿಸಿ ಭುವನೇಶ್ವರ್‍ಗೆ ವಿಕೆಟ್ ಒಪ್ಪಿಸಿದ್ರು. ಅಂಬಟಿ ರಾಯುಡು (8 ರನ್) ನಟರಾಜನ್‍ಗೆ ಕ್ಲೀನ್ ಬೌಲ್ಡಾದ್ರು. ಇನ್ನೊಂದೆಡೆ ಫಾಪ್ ಡುಪ್ಲೇಸಸ್ 22 ರನ್ ಗಳಿಸಿ ರನೌಟದ್ರು. ಕೇದಾರ್ ಜಾಧವ್ ಹೋರಾಟ ಮೂರು ರನ್ ಗೆ ಸೀಮಿತವಾಯ್ತು.
42ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಿಎಸ್ ಕೆ ತಂಡಕ್ಕೆ ಎಮ್.ಎಸ್. ಧೋನಿ ಮತ್ತು ರವೀಂದ್ರ ಜಡೇಜಾ ಆಧಾರವಾಗಿ ನಿಂತ್ರು. ಅಲ್ಲದೆ ಐದನೇ ವಿಕೆಟ್ ಗೆ 72 ರನ್ ಪೇರಿಸಿದ್ರು. ರವೀಂದ್ರ ಜಡೇಜಾ 35 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ 50 ರನ್ ದಾಖಲಿಸಿದ್ರರು.
ಮತ್ತೊಂದೆಡೆ ಮಹೇಂದ್ರ ಸಿಂಗ್ ಧೋನಿ ತಂಡವನ್ನು ಗೆಲುವಿನ ದಡ ಸೇರಿಸಲು ಸಾಕಷ್ಟು ಪ್ರಯತ್ನ ಪಟ್ಟರು. ಆದ್ರೆ ಕೊನೆಯ ಎರಡು ಓವರ್ ಗಳಲ್ಲಿ ಧೋನಿಗೆ ದೊಡ್ಡ ಹೊಡೆತ ಹೊಡೆಯಲು ಸಾಧ್ಯವಾಗಿಲ್ಲ. ಪರಿಣಾಮ ಧೋನಿ ಅಜೇಯ 47 ರನ್ ಗಳಿಸಿದ್ರೆ, ಸ್ಯಾಮ್ ಕುರನ್ ಅಜೇಯ 15 ರನ್ ದಾಖಲಿಸಿದ್ರು. ಕೊನೆಗೆ ಸಿಎಸ್ ಕೆ ತಂಡ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 157 ರನ್ ಗಳಿಸಿ ಏಳು ರನ್ ಗಳಿಂದ ಸೋಲು ಒಪ್ಪಿಕೊಂಡಿತ್ತು.
ಸನ್ ರೈಸರ್ಸ್ ತಂಡದ ಪರ ನಟರಾಜನ್ ಅವರು ಎರಡು ವಿಕೆಟ್ ಪಡೆದ್ರೆ, ಭುವನೇಶ್ವರ್, ಅಬ್ದುಲ್ ಸಮಾದ್ ತಲಾ ಒಂದು ವಿಕೆಟ್ ಪಡೆದ್ರು. ಅಜೇಯ ಅರ್ಧಶತಕ ಸಿಡಿಸಿದ್ದ ಪ್ರಿಯಮ್ ಗರ್ಗ್ ಪಂದ್ಯ ಶ್ರೇಷ್ಠರಾಗಿ ಹೊರಹೊಮ್ಮಿದ್ರು.








