ಹತ್ತು ವರ್ಷ ಕೇರಳ ಫುಡ್ ಬಿಟ್ಟುಬಿಡು.. ನಿನ್ನ ಬದುಕೇ ಕ್ರಿಕೆಟ್.. ವಿರಾಟ್ ಮಾತೇ ಸಂಜುಗೆ ಪ್ರೇರಣೆ..!
ಜಿಮ್ ನಲ್ಲಿ ವಿರಾಟ್ ಕೊಹ್ಲಿ ಅಭ್ಯಾಸ ನಡೆಸುತ್ತಿದ್ದರು. ವಿರಾಟ್ ಕೊಹ್ಲಿಯ ಫಿಟ್ ನೆಸ್ ವರ್ಕ್ ಔಟ್ ನೋಡಿದ್ದ ಮತ್ತೊಬ್ಬ ಕ್ರಿಕೆಟಿಗ, ವಿರಾಟ್ ಭಾಯ್ ಈ ರೀತಿ ಫಿಟ್ ನೆಸ್ ಕಾಯ್ದುಕೊಳ್ಳಲು ಹೇಗೆ ಸಾಧ್ಯ ? ಅಂತ ಪ್ರಶ್ನೆ ಮಾಡಿದ್ದಾರೆ.
ಅದಕ್ಕೆ ವಿರಾಟ್ ಉತ್ತರ ನೀಡಿದ್ದು ಹೀಗೆ ನೀನು ಎಷ್ಟು ವರ್ಷ ಕ್ರಿಕೆಟ್ ಆಡ್ತಿಯಾ… ಆಗ ಆ ಯುವಕ ನಾನು ಒಂದು ಹತ್ತು ವರ್ಷ ಆಡುತ್ತೇನೆ. ಅದಕ್ಕೆ ವಿರಾಟ್ ಉತ್ತರ, ಹಾಗಿದ್ರೆ 10 ವರ್ಷ ಕ್ರಿಕೆಟ್ ಗಾಗಿ ಮೀಸಲಿಡು. ಹತ್ತು ವರ್ಷದ ನಂತರ ನೀನು ಏನು ಬೇಕಾದ್ರೂ ಮಾಡು, ಎಷ್ಟು ಬೇಕಾದ್ರೂ ಕೇರಳದ ಆಹಾರಗಳನ್ನು ತಿನ್ನು. ಹತ್ತು ವರ್ಷಗಳ ನಂತರ ನೀನು ಕ್ರಿಕೆಟಿಗನಾಗಲು ಸಾಧ್ಯವಿಲ್ಲ. ಹತ್ತು ವರ್ಷ ಕಷ್ಟಪಡು ಎಂದಿದ್ದರು.
ಅಂದ ಹಾಗೇ ವಿರಾಟ್ ಕೊಹ್ಲಿ ಬಳಿ ಈ ರೀತಿ ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡಿದ್ದು ಸಂಜು ಸಾಮ್ಸನ್.
ಹೌದು, ವಿರಾಟ್ ಕೊಹ್ಲಿಯ ಫಿಟ್ ನೆಸ್ ಬಗ್ಗೆ ಯಾರು ಕೂಡ ಪ್ರಶ್ನೆ ಮಾಡುವಂಗಿಲ್ಲ. ಹೀಗಾಗಿ ವಿರಾಟ್ ಸಲಹೆಯನ್ನು ಚಾಚುತಪ್ಪದೆ ಸಂಜು ಸಾಮ್ಸನ್ ಪರಿಪಾಲಿಸಿಕೊಂಡು ಬಂದಿದ್ದಾರೆ. ಪರಿಣಾಮ 2020ರ ಐಪಿಎಲ್ ಟೂರ್ನಿಯಲ್ಲಿ ಸಂಜು ಸಾಮ್ಸನ್ ಅವರ ಬ್ಯಾಟಿಂಗ್ ವೈಖರಿಯೇ ಹೇಳುತ್ತಿದೆ.
ಅಷ್ಟಕ್ಕೂ ಸಂಜು ಸಾಮ್ಸನ್ ಅವರು ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ್ದ ಹುಡುಗ. ಅಂದ ಮೇಲೆ ಸಂಜುವಿನ ಕ್ರಿಕೆಟ್ ಬದ್ಧತೆಯ ಬಗ್ಗೆ ಹೇಳುವುದೇ ಬೇಡ. ಆದ್ರೆ ವಿರಾಟ್ ಕೊಹ್ಲಿಯ ಸಲಹೆಯಿಂದ ಸಂಜು ಸಾಮ್ಸನ್ ಅವರ ದೂರದೃಷ್ಟಿಯೇ ಬದಲಾಗಿ ಹೋಯ್ತು. ಕ್ರಿಕೆಟ್ ಅಭ್ಯಾಸದ ಜೊತೆಗೆ ಫಿಟ್ ನೆಸ್ ಕಡೆಗೂ ಹೆಚ್ಚಿನ ಆದ್ಯತೆಯನ್ನು ನೀಡಿದ್ದರು. ಅದರ ಫಲ ಈಗ ಅನುಭವಿಸುತ್ತಿದ್ದಾರೆ.
ಇನ್ನು ಕೊರೋನಾ ವೈರಸ್ ನಿಂದ ದೇಶಾದ್ಯಂತ ಲಾಕ್ ಡೌನ್ ಆದ ಕಾರಣ ಕ್ರಿಕೆಟಿಗರು ಕೂಡ ಮನೆಯಲ್ಲೇ ಕೂರಬೇಕಾಯ್ತು. ಹಾಗಂತ ಸಂಜು ಸಾಮ್ಸನ್ ಮನೆಯಲ್ಲಿ ಕೂತುಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಬಿಝಿಯಾಗಿರಲಿಲ್ಲ.ಬದಲಾಗಿ ಫಿಟ್ನೆಸ್ ಮತ್ತು ಕ್ರಿಕೆಟ್ ಅಭ್ಯಾಸದ ಕಡೆಗೆ ಗಮನ ಹರಿಸಿದ್ದರು.
ರಾಜಸ್ತಾನ ರಾಯಲ್ಸ್ ತಂಡದ ಪರ ಆಡುತ್ತಿರುವ ಸಂಜು ಅದ್ಭುತ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಇದರ ಹಿಂದೆ ಐದಾರು ತಿಂಗಳ ಶ್ರಮವಿದೆ. ಕ್ರಿಕೆಟ್ ಅಭ್ಯಾಸದ ಜೊತೆ ಫಿಟ್ನೆಸ್, ಡಯಟ್ ಮಾಡಿಕೊಂಡು 2020ರ ಐಪಿಎಲ್ ಟೂರ್ನಿಗೆ ಸಿದ್ಧತೆ ನಡೆಸಿಕೊಂಡಿದ್ದರು.
ಸಂಜು ಸಾಮ್ಸನ್ ಅವರ ಗೆಳೆಯ ಹಾಗೂ ಮೆಂಟರ್ ರೈಪಿ ಗೋಮ್ಜ್ ಹಾಗೂ ಮತ್ತೊಬ್ಬ ಗೆಳೆಯ ಮತ್ತು ಕ್ಲಾಸ್ ಮೇಟ್ ಅಮಲ್ ಮನೋಹರ್ ಜೊತೆಗೆ ಡಯಟಿಷಿಯನ್ ಅರುಣ್ ಅವರು ಸಂಜು ಸಾಮ್ಸನ್ ಅವರನ್ನು ಫಿಟ್ ಆಂಡ್ ಫೈನ್ ಬ್ಯಾಟ್ಸ್ ಮೆನ್ ಆಗಿ ರೂಪುಗೊಳ್ಳುವಂತೆ ಮಾಡಿದ್ದರು.
ಇನ್ನು ಸಂಜುಗೆ ಅವರ ಮೆಂಟರ್ ಹಾಗೂ ಗೆಳೆಯ ರೈಪಿ ಗೋಮ್ಜ್ ಜೊತೆ ಟೆನಿಸ್ ಬಾಲ್ ನಲ್ಲಿ ಅಭ್ಯಾಸ ಕೂಡ ನಡೆಸಿದ್ದರು. ಪರಿಣಾಮ ಸಂಜು ಸಾಮ್ಸನ್ ಅವರು ಪವರ್ ಫುಲ್ ಆಗಿ ಚೆಂಡನ್ನು ಹೊಡೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಕಠಿಣ ಶ್ರಮ, ಅಭ್ಯಾಸ, ಬದ್ಧತೆ ಇದ್ರೆ ಯಶ ಸಾಧಿಸಬಹುದು ಎಂಬುದಕ್ಕೆ ಸಂಜು ಸಾಮ್ಸನ್ ಕೂಡ ಉತ್ತಮ ನಿದರ್ಶನ.
ಈಗಾಗಲೇ ಆಡಿರುವ ಎರಡು ಪಂದ್ಯಗಳಲ್ಲಿ ಅಂದ್ರೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮುಂದಿನ ಪಂದ್ಯಗಳಲ್ಲೂ ಅದೇ ರೀತಿಯ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.