ಐಪಿಎಲ್ ಪಾರ್ಟ್ -2 – ಈ ಮೂರು ತಂಡಗಳ ನಾಯಕತ್ವದಲ್ಲಿ ಬದಲಾವಣೆ..!
ಐಪಿಎಲ್ ನಲ್ಲಿ ನಾಯಕತ್ವ ಬದಲಾವಣೆ ಮಮೂಲಿ ವಿಷ್ಯ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೊರತುಪಡಿಸಿ ಬೇರೆ ಯಾವುದೇ ತಂಡಕ್ಕೂ ಖಾಯಂ ನಾಯಕನಾಗಿ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಮಹೇಂದ್ರ ಸಿಂಗ್ ಧೋನಿ ಮಾತ್ರ ಚೆನ್ನೈ ತಂಡಕ್ಕೆ ಕಳೆದ 12 ವರ್ಷಗಳಿಂದ ನಾಯಕನಾಗಿದ್ದಾರೆ. ಸಿಎಸ್ ಕೆ ತಂಡಕ್ಕೆ ಎರಡು ವರ್ಷ ನಿಷೇಧ ಹೇರಿದ ಕಾರಣ ಧೋನಿ ಪುಣೆ ತಂಡದ ಪರ ಆಡಿದ್ದರು.
ಅದನ್ನು ಬಿಟ್ಟು ಮುಂಬೈ ತಂಡಕ್ಕೆ ರೋಹಿತ್ ಶರ್ಮಾ ಕಳೆದ ಎಂಟು ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡವವನ್ನು ಮುನ್ನಡೆಸುತ್ತಿದ್ದಾರೆ. ಹಾಗೇ ಆರ್ ಸಿಬಿ ಕೂಡ. ಪ್ರಾರಂಭದಲ್ಲಿ ನಾಯಕತ್ವದ ವಿಚಾರ ಸಮಸ್ಯೆಯಾಗಿ ಪರಿಣಮಿಸಿದ್ರೂ ವಿರಾಟ್ ತಂಡದ ಸಾರಥಿಯಾದ ನಂತರ ಆರ್ ಸಿಬಿ ಕೂಡ ನಾಯಕನನ್ನು ಬದಲಾಯಿಸಲು ಮನಸ್ಸು ಮಾಡಿಲ್ಲ.
ಇದನ್ನು ಬಿಟ್ಟು ಇನ್ನುಳಿದ ಎಲ್ಲಾ ತಂಡಗಳಿಗೂ ನಾಯಕತ್ವದ ವಿಚಾರವೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕೆಲವು ತಂಡಗಳಿಗೆ ವರ್ಷಕ್ಕೊಬ್ಬ ನಾಯಕನನ್ನಾಗಿ ನೇಮಿಸಿದೆ.
ಇದೀಗ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಸೆಪ್ಟಂಬರ್ -ಅಕ್ಟೋಬರ್ ನಲ್ಲಿ ಮುಂದುವರಿಲಿದೆ. ಯುಎಇನಲ್ಲಿ ನಡೆಯಲಿರುವ ಟೂರ್ನಿಗೆ ಬಿಸಿಸಿಐ ಅಂತಿಮ ಹಂತದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದೇ ರೀತಿ ಫ್ರಾಂಚೈಸಿಗಳು ಕೂಡ ಪ್ಲಾನ್ ಮಾಡಿಕೊಳ್ಳುತ್ತಿವೆ.
ಈ ನಡುವೆ, ಐಪಿಎಲ್ ಮುಂದುವರಿದ ಪಂದ್ಯಗಳಿಗೆ ವಿದೇಶಿ ಆಟಗಾರರ ಅಲಭ್ಯತೆ ಕಾಡುತ್ತಿದೆ. ಸದ್ಯ ತಂಡಗಳಲ್ಲಿರುವ ಬಹುತೇಕ ವಿದೇಶಿ ಆಟಗಾರರು ಅಲಭ್ಯರಾಗುವ ಸಾಧ್ಯತೆಗಳಿದ್ರೂ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಬಿಸಿಸಿಐ ವಿದೇಶಿ ಕ್ರಿಕೆಟ್ ಮಂಡಳಿಗಳ ಜೊತೆ ಚರ್ಚೆ ನಡೆಸುತ್ತಿದೆ.
ಅದೇನೇ ಇರಲಿ, ಐಪಿಎಲ್ ಪಾರ್ಟ್ -2 ನಲ್ಲಿ ಕೆಲವು ನಾಯಕತ್ವದ ಬದಲಾವಣೆಯಾಗುವ ಸಾಧ್ಯತೆಗಳಿವೆ. ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಶ್ರೇಯಸ್ ಅಯ್ಯರ್ ಸೇರಿಕೊಳ್ಳುವ ಕಾರಣ ರಿಷಬ್ ಪಂತ್ ನಾಯಕತ್ವವನ್ನು ಬಿಟ್ಟುಕೊಡಬೇಕಾಗುತ್ತದೆ. ಶ್ರೇಯಸ್ ಅಯ್ಯರ್ ಗಾಯಗೊಂಡ ಕಾರಣ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಾರಥಿಯಾಗಿದ್ದರು. ನಾಯಕನಾಗಿ ಪಂತ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅಯ್ಯರ್ 41 ಐಪಿಎಲ್ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದು 23 ಪಂದ್ಯಗಳನ್ನು ಗೆದ್ದಿದ್ದಾರೆ. ಒಟ್ಟಿನಲ್ಲಿ ಡೆಲ್ಲಿ ತಂಡದ ನಾಯಕ ಯಾರಾಗುತ್ತಾರೆ ಅನ್ನೋದನ್ನು ಕಾದು ನೋಡಬೇಕು.
ಇನ್ನು ಕೆಕೆಆರ್ ತಂಡದಲ್ಲೂ ಕೂಡ ಅಷ್ಟೇ. ಸದ್ಯ ಇಯಾನ್ ಮೊರ್ಗಾನ್ ಅವರು ತಂಡದ ಕ್ಯಾಪ್ಟನ್. ಆದ್ರೆ ಮೊರ್ಗಾನ್ ಯುಎಇ ನಲ್ಲಿ ಆಡುತ್ತಾರೋ ಇಲ್ಲವೋ ಇನ್ನೂ ಗೊತ್ತಾಗಿಲ್ಲ. ಒಂದು ವೇಳೆ ಮೊರ್ಗಾನ್ ಲಭ್ಯರಾಗದೇ ಇದ್ರೆ ಮತ್ತೆ ದಿನೇಶ್ ಕಾರ್ತೀಕ್ ತಂಡವನ್ನು ಮುನ್ನಡೆಸಬೇಕಾಗುತ್ತದೆ. ಅಥವಾ ಯುವ ಆಟಗಾರ ಶುಬ್ಮನ್ ಗಿಲ್ ಗೆ ನಾಯಕತ್ವ ಕೊಟ್ಟು ಹೊಸ ಪ್ರಯೋಗಕ್ಕೆ ಕೈ ಹಾಕುತ್ತಾ ಅನ್ನೋದು ಕೆಕೆಆರ್ ತಂಡದ ಮ್ಯಾನೇಜ್ ಮೆಂಟ್ ಗೆ ಬಿಟ್ಟ ವಿಚಾರ.
ಅದೇ ರೀತಿ ಸನ್ ರೈಸರ್ಸ್ ಹೈದ್ರಬಾದ್ ತಂಡ. ಇಲ್ಲೂ ನಾಯಕತ್ವದ ಸಮಸ್ಯೆ ಎದುರಾಗಿದೆ. ಈ ಬಾರಿಯ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಬದಲು ಕೇನ್ ವಿಲಿಯಮ್ಸನ್ ಅವರಿಗೆ ನಾಯಕತ್ವವನ್ನು ನೀಡಲಾಗಿತ್ತು. ಆದ್ರೆ ಈಗ ಕೇನ್ ವಿಲಿಯಮ್ಸನ್ ಮತ್ತು ಡೇವಿಡ್ ವಾರ್ನರ್ ಇಬ್ಬರು ಕೂಡ ಐಪಿಎಲ್ ಮುಂದುವರಿದ ಟೂರ್ನಿಯಲ್ಲಿ ಆಡುವುದು ಅನುಮಾನವಾಗಿದೆ. ಹೀಗಾಗಿ ಎಸ್ ಆರ್ ಎಚ್ ತಂಡ ಕೂಡ ಹೊಸ ನಾಯಕನ ಹುಡುಕಾಟದಲ್ಲಿದೆ. ಜಾನಿ ಬೇರ್ ಸ್ಟೋವ್ ಕೂಡ ಆಡುವುದು ಸಂಶಯವಾಗಿದೆ. ಇದ್ರಿಂದ ಕನ್ನಡಿಗ ಮನಿಷ್ ಪಾಂಡೆ ತಂಡವನ್ನು ಮುನ್ನಡೆಸುವ ಸಾಧ್ಯತೆಗಳಿವೆ.
ಒಟ್ಟಾರೆ, ಯುಎಇ ನಲ್ಲಿ ನಡೆಯುವ ಐಪಿಎಲ್ ಮುಂದುವರಿದ ಟೂರ್ನಿ ಫ್ರಾಂಚೈಸಿಗಳಿಗೆ ದೊಡ್ಡ ಸಮಸ್ಯೆಯಾಗಿ ಕಾಡಲಿದೆ.