ಡೆಲ್ಲಿ ಬೊಂಬಾಟ್ ಆಟ : ದುಬೈನಲ್ಲೂ ರೈಸ್ ಆಗದ ಹೈದರಾಬಾದ್
ದುಬೈನಲ್ಲಿ ಆಟ ಆರಂಭವಾದಾಗ ದೊಡ್ಡ ನಿರೀಕ್ಷೆ ಇತ್ತು. ಸನ್ ರೈಸರ್ಸ್ ಹೈದ್ರಾಬಾದ್ ಚೇತರಿಸಿಕೊಳ್ಳಬಹುದು ಅನ್ನುವ ವಿಶ್ಲೇಷಣೆ ನಡೆಯುತ್ತಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತಾಕತ್ತಿನ ಬಗ್ಗೆಯೂ ಚರ್ಚೆ ಆಗಿತ್ತು. ಆದರೆ ದುಬೈ ಡರ್ಬಿಯಲ್ಲಿ ಸನ್ ರೈಸರ್ಸ್ ಸೋತಿದೆ. ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಟಾಸ್ ಗೆದ್ದ ಸನ್ರೈಸರ್ಸ್ ಬ್ಯಾಟಿಂಗ್ ಆಯ್ದುಕೊಂಡಿತ್ತು. ಕೇನ್ವಿಲಿಯಮ್ಸನ್ ಆಯ್ಕೆ ತಪ್ಪು ಅನ್ನುವುದು ಗೊತ್ತಾಗಲು ಜಸ್ಟ್ ಮೂರೇ ಮೂರು ಎಸೆತ ಸಾಕಾಗಿತ್ತು. ಇನ್ನಿಂಗ್ಸ್ನ ಮೂರನೇ ಓವರ್ನಲ್ಲಿ ಅನ್ರಿಚ್ ನೋರ್ಟ್ಜೆ ಅಪಾಯಕಾರಿ ಡೇವಿಡ್ ವಾರ್ನರ್ರನ್ನು ಖಾತೆ ತೆರೆಯದಂತೆ ಮಾಡಿ ಡಗ್ಔಟ್ಗೆ ಅಟ್ಟಿದ್ರು. ವೃದ್ಧಿಮಾನ್ ಸಾಹಾ ಕೇನ್ವಿಲಿಯಮ್ಸನ್ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿ ತೆಗೆದುಕೊಂಡರು. ಸಹಾ 2 ಬೌಂಡರಿ ಮತ್ತು 1 ಸಿಕ್ಸ್ ಬಾರಿಸಿ ಡೆಲ್ಲಿಗೆ ಶಾಕ್ ನೀಡುವ ಯೋಜನೆ ಮಾಡಿದ್ದರು. ಆದ್ರೆ ದಾಳಿಗಿಳಿದ ಕಗಿಸೊ ರಬಾಡಾ 18 ರನ್ಗಳಿಸಿದ್ದ ಸಾಹಾ ವಿಕೆಟ್ ಹಾರಿಸಿದ್ರು.
ವಿಲಿಯಮ್ಸನ್ ಮತ್ತು ಮನೀಶ್ ಪಾಂಡೆ ಜೋಡಿ ವಿಕೆಟ್ ಕಾಯ್ದುಕೊಂಡು ರನ್ರೇಟ್ ಏರಿಸುವ ಪ್ಲಾನ್ ಮಾಡಿತ್ತು. ಈ ಮಧ್ಯೆ ಡೆಲ್ಲಿ ಫೀಲ್ಡರ್ಗಳುಸ ವಿಲಿಯಮ್ಸನ್ಗೆ 2 ಜೀವದಾನ ಕೂಡ ನೀಡಿದ್ದರು. ಆದರೆ ವಿಲಿಯಮ್ಸನ್ ಇದರ ಉಪಯೋಗ ಪಡೆಯಲಿಲ್ಲ. 26 ಎಸೆತಗಳಲ್ಲಿ 18 ರನ್ಗಳಿಸಿದ್ದ ವಿಲಿಯಮ್ಸನ್ ಅಕ್ಸರ್ ಪಟೇಲ್ ಎಸೆತದಲ್ಲಿ ಹೆಟ್ಮಯರ್ಗೆ ಕ್ಯಾಚಿತ್ತು ಔಟಾದರು. ಮನೀಷ್ ಪಾಂಡೆ 16 ಎಸೆತಗಳಲ್ಲಿ 17 ರನ್ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದ್ರು. ಇವರ ಹಿಂದೆಯೇ ಅನ್ರಿಚ್ ನೋರ್ಟ್ಜೆ 3ರನ್ಗಳಿಸಿದ್ದ ಕೇಧಾರ್ ಜಾಧವ್ ಆಟಕ್ಕೆ ಅಂತ್ಯ ಹಾಡಿದರು. ಅಕ್ಸರ್ ಪಟೇಲ್ 10 ರನ್ಗಳಿಸಿದ್ದ ಜೇಸನ್ ಹೋಲ್ಡರ್ ರನ್ನು ಪೃಥ್ವಿ ಷಾಗೆ ಕ್ಯಾಚ್ ಕೊಡುವಂತೆ ಮಾಡಿ ಹೈದ್ರಾಬಾದ್ ಇನ್ನಿಂಗ್ಸ್ಗೆ ಶಾಕ್ ಕೊಟ್ರು.
ಡೆತ್ ಓವರ್ಗಳಲ್ಲಿ ಅಬ್ದುಲ್ ಸಮದ್ ಮತ್ತು ರಶೀದ್ ಖಾನ್ ಹೋರಾಟ ಮಾಡಿದರು. ಸಮದ್ 28 ರನ್ಗಳಿಸಿದ್ರೆ, ರಶೀದ್ 22ರನ್ಗಳಿಸಿದ್ರು. ನಿಗದಿತ 20 ಓವರುಗಳಲ್ಲಿ ಎಸ್ಆರ್ಎಚ್ 9 ವಿಕೆಟ್ ಕಳೆದುಕೊಂಡು 134ರನ್ಗಳಿಸಿತ್ತು. ರಬಾಡಾ 3 ವಿಕೆಟ್ ಪಡೆದ್ರೆ ಅನ್ರಿಚ್ ನೋರ್ಟ್ಜೆ ಮತ್ತು ಅಕ್ಸರ್ ಪಟೇಲ್ ತಲಾ 2 ವಿಕೆಟ್ ಪಡೆದ್ರು.
ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ಗೆ ಪೃಥ್ವಿ ಷಾ ಮತ್ತು ಶಿಖರ್ ಧವನ್ ಬೌಂಡರಿ ಗಳ ಮೇಲೆ ಬೌಂಡರಿ ಸಿಡಿಸಿ ಉತ್ತಮ ಆರಂಭ ತಂದುಕೊಟ್ರು. ಪೃಥ್ವಿ ಷಾ 11 ರನ್ಗಳಿಸಿ ಖಲೀಲ್ ಅಹ್ಮದ್ಗೆ ವಿಕೆಟ್ ಒಪ್ಪಿಸಿದ್ರು. ಧವನ್ ಜೊತೆ ಸೇರಿದ ಶ್ರೇಯಸ್ ಅಯ್ಯರ್ ಹೈದ್ರಾಬಾದ್ ಬೌಲರ್ಗಳನ ಬೆವರಿಳಿಸಿದ್ರು. ಬೌಂಡರಿ, ಸಿಕ್ಸರ್ಗಳು ಸರಾಗವಾಗಿ ಹರಿದು ಬಂತು. ಧವನ್ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 42 ರನ್ಗಳಿಸಿ ರಶೀದ್ಗೆ ವಿಕೆಟ್ ಒಪ್ಪಿಸಿದ್ರು.
ಅಯ್ಯರ್ ಜೊತೆ ಸೇರಿದ ರಿಷಭ್ ಪಂತ್ ಕೂಡ ಅಬ್ಬರದ ಆಟಕ್ಕೆ ಕೈ ಹಾಕಿದ್ರು. ಪರಿಣಾಮ ಡೆಲ್ಲಿ ಗೆಲುವು ಸುಲಭವಾಯಿತು. ಅಯ್ಯರ್ ಸಿಕ್ಸರ್ ಸಿಡಿಸುವ ಮೂಲಕ ಡೆಲ್ಲಿ ಇನ್ನೂ 13 ಎಸೆತಗಳು ಬಾಕಿ ಇರುವಂತೆ ಜಯ ಸಾಧಿಸಿತು. ಅಯ್ಯರ್ 41 ಎಸೆತದಲ್ಲಿ ಅಜೇಯ 47 ರನ್ಗಳಿಸಿದ್ರೆ, ಪಂತ್ 21 ಎಸೆತಗಳಲ್ಲಿ ಅಜೇಯ 35 ರನ್ಗಳಿಸಿದ್ರು. ಈ ಜಯದ ಜೊತೆಗೆ ಡೆಲ್ಲಿ 14 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿತು.









