ಐಪಿಎಲ್ 2021- ಮುಂಬೈ ವಿರುದ್ಧ ರೋಚಕ ಜಯ ದಾಖಲಿಸಿದ ಆರ್ ಸಿಬಿ
ಬಹುತೇಕ ಐಪಿಎಲ್ ಟೂರ್ನಿಯ ಮೊದಲ ಪಂದ್ಯವನ್ನು ಸೋಲುತ್ತಿದ್ದ ಆರ್ ಸಿಬಿ ಈ ಬಾರಿ ಗೆಲುವಿನ ರುಚಿ ಕಂಡಿದೆ. ಆದ್ರೆ ಮುಂಬೈ ಇಂಡಿಯನ್ಸ್ ತಂಡದ ಮೊದಲ ಪಂದ್ಯವನ್ನು ಸೋಲುತ್ತಿರುವ ಪರಿಪಾಠ ಈ ಬಾರಿಯೂ ಮುಂದುವರಿದಿದೆ.
ಚೆನ್ನೈ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲೇ ರೋಹಿತ್ ಶರ್ಮಾ (15) ವಿಕೆಟ್ ಅನ್ನು ಕಳೆದುಕೊಂಡಿತ್ತು. ಬಳಿಕ ಆರಂಭಿಕ ಕ್ರಿಸ್ ಲೀನ್ ಜೊತೆ ಸೇರಿದ ಸೂರ್ಯ ಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್ ನಡೆಸಿದ್ರು. ಅಲ್ಲದೆ ಎರಡನೇ ವಿಕೆಟ್ ಗೆ 70 ರನ್ ಕೂಡ ಕಲೆ ಹಾಕಿದ್ರು.
ಈ ಹಂತದಲ್ಲಿ ಸೂರ್ಯ ಕುಮಾರ್ ಯಾದವ್ 31 ರನ್ ಗಳಿಸಿ ಔಟಾದ್ರು. ಇನ್ನೊಂದೆಡೆ ಆಕರ್ಷಕ 49 ರನ್ ದಾಖಲಿಸಿದ್ದ ಕ್ರಿಸ್ ಲೀನ್ ವಾಷಿಂಗ್ಟನ್ ಸುಂದರ್ ಗೆ ಬಲಿಯಾದ್ರು.
ಇನ್ನುಳಿದಂತೆ ಹಾರ್ದಿಕ್ ಪಾಂಡ್ಯ 13 ರನ್ ಗೆ ಸೀಮಿತವಾದ್ರೆ, ಕಿರಾನ್ ಪೊಲಾರ್ಡ್ ಅಬ್ಬರ 7 ರನ್ ಗೆ ಅಂತ್ಯಗೊಂಡಿತ್ತು. ಕೃನಾಲ್ ಪಾಂಡ್ಯ ಕೂಡ 7 ರನ್ ಗೆ ಔಟಾದ್ರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ 9 ವಿಕೆಟ್ ಗೆ 158 ರನ್ ದಾಖಲಿಸಿತ್ತು.
ಆರ್ ಸಿಬಿ ಪರ ಹರ್ಷೆಲ್ ಪಟೇಲ್ 27 ರನ್ ಗೆ ಐದು ವಿಕೆಟ್ ಉರುಳಿಸಿ ಮುಂಬೈ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದ್ರು.
ಸವಾಲನ್ನು ಬೆನ್ನಟ್ಟಿದ್ದ ಆರ್ ಸಿಬಿ ಆಘಾತದ ಮೇಲೆ ಆಘಾತ ಅನುಭವಿಸಿತ್ತು. ವಿರಾಟ್ ಕೊಹ್ಲಿ ಜೊತೆ ಆರಂಭಿಕನಾಗಿ ಬಡ್ತಿ ಪಡೆದ ವಾಷಿಂಗ್ಟನ್ ಸುಂದರ್ 10 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದ್ರು. ನಂತರ ರಜತ್ ಪಟಿದಾರ್ 8 ರನ್‍ಗೆ ಸುಸ್ತಾದ್ರು.
ಬಳಿಕ ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ವಿರಾಟ್ ಕೊಹ್ಲಿ ತಂಡದ ರನ್ ಗತಿಯನ್ನು ಏರಿಸಿದ್ರು. ತಂಡದ ಇನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ 33 ರನ್ ಗೆ ಔಟಾದ್ರು. ಇನ್ನೊಂದೆಡೆ ಅಬ್ಬರದ ಬ್ಯಾಟಿಂಗ್ ನಡೆಸಿದ್ದ ಗ್ಲೇನ್ ಮ್ಯಾಕ್ಸ್ ವೆಲ್ 39 ರನ್ ಸಿಡಿಸಿ ಪೆವಿಲಿಯನ್ ಗೆ ಹಿಂತಿರುಗಿದ್ರು.
ಬಳಿಕ ತಂಡಕ್ಕೆ ಆಧಾರವಾಗಿ ನಿಂತಿದ್ದು ಎಬಿಡಿ ವಿಲಿಯರ್ಸ್. ಏಕಾಂಗಿಯಾಗಿಯೇ ತಂಡವನ್ನು ಗೆಲುವಿನ ದಡ ಸೇರಿಸಿದ್ದ ಎಬಿಡಿ 48 ರನ್ ಗಳಿಸಿ ರನೌಟಾದ್ರು. ಅಷ್ಟರಲ್ಲೇ ತಂಡದ ಗೆಲುವಿಗೆ ಬೇಕಾಗಿದ್ದು ಕೇವಲ ಒಂದು ರನ್ ಮಾತ್ರ. ಅಂತಿಮವಾಗಿ ಆರ್ ಸಿಬಿ ಇನಿಂಗ್ಸ್ ನ ಕೊನೆಯ ಎಸೆತದಲ್ಲಿ 2 ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು. ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಹರ್ಷೆಲ್ ಪಟೇಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.