ಐಪಿಎಲ್ 2021 – ವ್ಯರ್ಥಗೊಂಡ ಮನಿಷ್ ಹೋರಾಟ.. ಕೆಕೆಆರ್ ಗೆ ತಲೆಬಾಗಿದ ಎಸ್ ಆರ್ ಎಚ್…!
14ನೇ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಬಾದ್ ತಂಡ 10 ರನ್ ಗಳಿಂದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಲು ಅನುಭವಿಸಿದೆ.
ಚೆನ್ನೈ ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದ್ರಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 177 ರನ್ ಗಳಿಸಲಷ್ಟೇ ಶಕ್ತವಾಯ್ತು.
ಕೆಕೆಆರ್ ತಂಡ ಪರ ಆರಂಭಿಕ ನಿತೇಶ್ ರಾಣಾ 56 ಎಸೆತಗಳಲ್ಲಿ 9 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಗಳ ಸಹಾಯದಿಂದ ಆಕರ್ಷಕ 89 ರನ್ ಸಿಡಿಸಿದ್ರು. ಶುಬ್ಮನ್ ಗಿಲ್ 15 ರನ್ ಗೆ ಸೀಮಿತವಾದ್ರು.
ಇನ್ನೊಂದೆಡೆ ರಾಹುಲ್ ತ್ರಿಪಾಠಿ 29 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ನೆರವಿನಿಂದ ಅಬ್ಬರದ 53 ರನ್ ದಾಖಲಿಸಿದ್ರು.
ಇನ್ನುಳಿದಂತೆ ಆಂಡ್ರೆ ರಸೆಲ್ 5 ರನ್ ಹಾಗೂ ನಾಯಕ ಇಯಾನ್ ಮೊರ್ಗಾನ್ 2 ರನ್ ಗೆ ತನ್ನ ಹೋರಾಟವನ್ನು ಮುಗಿಸಿದ್ರು.
ಕೊನೆ ಗಳಿಗೆಯಲ್ಲಿ ದಿನೇಶ್ ಕಾರ್ತಿಕ್ 9 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ನ ಸಹಾಯದಿಂದ ಅಜೇಯ 22 ರನ್ ಗಳಿಸಿದ್ರು. ಎಸ್ ಆರ್ ಎಚ್ ತಂಡದ ಪರ ಮಹಮ್ಮದ್ ನಬಿ ಮತ್ತು ರಶೀದ್ ಖಾನ್ ತಲಾ ಎರಡು ವಿಕೆಟ್ ಉರುಳಿಸಿದ್ರು.
ಗೆಲ್ಲಲು 188 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಎಸ್ ಆರ್ ಎಚ್ ತಂಡ ಆರಂಭದಲ್ಲೇ ಡೇವಿಡ್ ವಾರ್ನರ್ (3 ರನ್) ಹಾಗೂ ವೃದ್ದಿಮಾನ್ ಸಾಹ (7 ರನ್) ವಿಕೆಟ್ ಗಳನ್ನು ಕಳೆದುಕೊಂಡಿತ್ತು.
ನಂತರ ಮನೀಷ್ ಪಾಂಡೆ ಮತ್ತು ಜೋನಿ ಬೇರ್ ಸ್ಟೋವ್ ಮೂರನೇ ವಿಕೆಟ್ ಗೆ 92 ರನ್ ಗಳಿಸಿ ತಂಡಕ್ಕೆ ಗೆಲ್ಲುವ ಸೂಚನೆ ನೀಡಿದ್ರು. ಆದ್ರೆ ಈ ಹಂತದಲ್ಲಿ ಜಾನಿ ಬೇರ್ ಸ್ಟೋವ್ ಪೆವಿಲಿಯನ್ ದಾರಿ ಹಿಡಿದ್ರು. ಬೇರ್ ಸ್ಟೋವವ್ 40 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ನೆರವಿನಿಂದ 55 ರನ್ ದಾಖಲಿಸಿದ್ರು.
ಇನ್ನೊಂದೆಡೆ ಮನಿಷ್ ಪಾಂಡೆ ಏಕಾಂಗಿ ಹೋರಾಟ ನಡೆಸಿದ್ರು. ಈ ನಡುವೆ ಮಹಮ್ಮದ್ ನಬಿ (14 ರನ್), ವಿಜಯ್ ಶಂಕರ್ (11 ರನ್) ವಿಕೆಟ್ ಒಪ್ಪಿಸಿದ್ರು. ಅಂತಿಮವಾಗಿ ಅಬ್ದುಲ್ ಸಮಾದ್ ಎಂಟು ಎಸೆತಗಳಲ್ಲಿ ಎರಡು ಸಿಕ್ಸರ್ ಸಿಡಿಸಿ ಅಜೇಯ 19 ರನ್ ಗಳಿಸಿದ್ರೆ, ಮನಿಷ್ ಪಾಂಡೆ 44 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ನೆರವಿನಿಂದ ಅಜೇಯ 61 ರನ್ ದಾಖಲಿಸಿದ್ರು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ನಿತೇಶ್ ರಾಣಾ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.